ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ರಂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ತನ್ನ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬಿಜೆಪಿ, ರಾಜ್ಯದಲ್ಲಿ ತನ್ನ ಮೊದಲ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಅಭ್ಯರ್ಥಿಗಳ ಜೊತೆ ಚರ್ಚೆ ನಡೆದರು ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿಲ್ಲ.
ಇದೀಗ ಎರಡನೇ ಹಂತದ ಸಭೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿದೆ. ಆ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಮಂಗಳವಾರ ಅಥವಾ ಬುಧವಾರ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಅಮಿತ್ ಶಾ ಮತ್ತು ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ನಡುವೆ ಸಭೆ ನಿಗದಿಯಾಗಿದೆ. ಸಭೆಯಲ್ಲಿ ರಾಜ್ಯದ ಮೊದಲ ಪಟ್ಟಿ ಕುರಿತ ಚರ್ಚೆ ನಡೆಯಲಿದೆ. ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ರಾಜ್ಯ ಪ್ರಮುಖ ನಾಯಕರ ಅಭಿಪ್ರಾಯ ಪಡೆದಿರುವ ವರಿಷ್ಠರು ಮತ್ತೊಂದು ಸುತ್ತಿನ ಚರ್ಚೆಗೆ ಸೂಚಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ, ಬಿ.ವೈ ವಿಜಯೇಂದ್ರ, ಆರ್.ಅಶೋಕ್ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಭಾನುವಾರ ದಿಲ್ಲಿಗೆ ಬರುವಂತೆ ಸೂಚಿಸಲಾಗಿದೆ.