ಹೊಸದಿಗಂತ ವರದಿ,ಮಂಡ್ಯ :
ಕರ್ನಾಟಕದ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ತಿರಸ್ಕರಿಸಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮತದಾರರಿಗೆ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಮಂಡ್ಯ ವಿವಿ ಆವರಣದಲ್ಲಿ ನಡೆದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕವೆಂದರೆ ನಿರ್ಲಕ್ಷ್ಯವಾಗಿದೆ. ಆರು ತಿಂಗಳುಗಳಿಂದ ಬರ ಪರಿಹಾರಕ್ಕೆ ಮನೆ ಮನೆಗೆ ತಿರುಗಾಡಿದರೂ ಸಹ ಹಣ ಬಿಡುಗಡೆ ಮಾಡಿಲ್ಲ. ನರೇಗಾ ಯೋಜನೆಯಡಿ ಕೆಲಸ ಮಾಡಿರುವವರಿಗೆ ನಾಲ್ಕು ತಿಂಗಳಿನಿಂದ ಹಣ ನೀಡಿಲ್ಲ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.
ಕೇಂದ್ರದ ಬರ ಅಧ್ಯಯನ ತಂಡ ರಾಜ್ಯಕ್ಕೆ ಬಂದು ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ನೀಡಿದರೂ, ಅಮಿತ್ ಶಾ ನೇತೃತ್ವದ ಸಮಿತಿ ಒಂದೇ ಒಂದು ಸಭೆ ಮಾಡಲಿಲ್ಲ. ಕಾಂಗ್ರೆಸ್ ಹತ್ತಾರು ಯೋಜನೆಗಳನ್ನು ನಿಲ್ಲಿಸಿದೆ. ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಕೂಗಬೇಕಾಗಿದೆ. ಈ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯನ್ನು ನಿರ್ಲಕ್ಷ್ಯ ಮಾಡಬೇಕಿದೆ. ಕಾವೇರಿ ವಿಚಾರದಲ್ಲಿ ಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ಜೂನ್ವರೆಗೂ ರೈತರನ್ನು ಕಾಪಾಡುವ ಹೊಣೆಗಾರಿಕೆ ನಮ್ಮ ಸರ್ಕಾರದ ಮೇಲಿದೆ ಎಂದರು.
ಸಂಕಷ್ಟದ ಸಮಯದಲ್ಲೂ ನಮ್ಮ ಸರ್ಕಾರ ಜಿಲ್ಲೆಯ ಅಭಿವೃದ್ಧಿ ಪರವಾಗಿದೆ. ಕಳೆದ 30 ವರ್ಷಗಳಿಂದ ಮೈಷುಗರ್ ಸಮಸ್ಯೆ ಎದುರಿಸುತ್ತಿದ್ದಕ್ಕೆ ನೂತನ ಕಾರ್ಖಾನೆಟಯನ್ನು ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಹೇಳಿರುವುದು ಶ್ಲಾಘನೀಯ ಎಂದು ತಿಳಿಸಿದರು.