ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಶಿವಮೊಗ್ಗ (Shivamogga) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ (Geetha Shivaraj Kumar) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಮ್ಮ ಚುನಾವಣಾ ಸಿದ್ಧತೆ ಕುರಿತು ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಎಲ್ಲರೂ ಪರಿಚಿತರೇ ಇದ್ದಾರೆ. ಹೊಸಬರು ಯಾರಿಲ್ಲ. ಹೀಗಾಗಿ ಗೆಲ್ಲುವ ಭರವಸೆ ಇದೆ ಎಂದರು.
ಕಳೆದ ಒಂಬತ್ತು ವರ್ಷಗಳ ಹಿಂದೆ ಚುನಾವಣೆಗೆ ನಿಂತಿದ್ದೆ. ಆದರೆ ನಾನು 17 ದಿನ ಕೆಲಸ ಮಾಡಿದ್ದೆ. ಹೀಗಾಗಿ ಸೋಲಾಗಿತ್ತು ಅನಿಸುತ್ತದೆ. ಈ ಬಾರಿ ಹೆಚ್ಚಿನ ಸಮಯ ಶಿವಮೊಗ್ಗದಲ್ಲಿ ಇರುತ್ತೇನೆ. ನನ್ನ ಸಹೋದರ ಸಹ ಬೆಂಬಲವಾಗಿ ಇದ್ದಾನೆ. ಶಿವಮೊಗ್ಗದಲ್ಲಿ ಈಗಾಗಲೇ ಮನೆ ಮಾಡಿದ್ದೇನೆ. ಓಡಾಟಕ್ಕೆ ಸಮಸ್ಯೆ ಇಲ್ಲ. ಚುನಾವಣೆಯಲ್ಲಿ ಯಾರು ಭಾಗಿ ಆಗುತ್ತಾರೆ ಎಂದು ಇನ್ನೂ ಪ್ಲಾನ್ ಮಾಡಿಲ್ಲ, ಶಿವಣ್ಣ ಬರುವುದು ಖಚಿತ ಎಂದರು.
ಪತ್ನಿ ಗೀತಾಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿರುವ ಬಗ್ಗೆ ಮಾತನಾಡಿದ ನಟ ಶಿವರಾಜ್ ಕುಮಾರ್, ಗೀತಾಗೆ ರಾಜಕೀಯ ಎಷ್ಟು ಮುಖ್ಯವೋ ನನಗೆ ಸಿನಿಮಾ ಅಷ್ಟೇ ಮುಖ್ಯ. ನನ್ನ ಬೆಂಬಲ ಖಂಡಿತ ಇರುತ್ತದೆ. ಇದು ಚುನಾವಣೆ ಮಾತ್ರ, ನಾನು ಗೆಲ್ಲುತ್ತೇನೆ ಎಂಬ ಭರವಸೆ ಇರಲೇಬೇಕು ಎಂದರು. ಪ್ರಚಾರದ ಬಗ್ಗೆ ಮಾತನಾಡಿದ ಅವರು, ನನ್ನ ಒತ್ತಾಯಕ್ಕೆ ಯಾರು ಕೂಡ ಗೀತಾ ಪರ ಪ್ರಚಾರಕ್ಕೆ ಬರುವುದು ಬೇಡ ಎಂದರು.