ಮಾ.17 ರಂದು ಮಂಗಳೂರಿನಲ್ಲಿ ಪೇಜಾವರ ಶ್ರೀ ಗಳಿಗೆ ಭವ್ಯ ಸ್ವಾಗತ

ಹೊಸದಿಗಂತ ವರದಿ, ಮಂಗಳೂರು:

ಅಯೋಧ್ಯೆಯಲ್ಲಿ ಶ್ರೀ ರಾಮದೇವರ ಪ್ರಾಣಪ್ರತಿಷ್ಠಾಪನೆ ಮತ್ತು 48 ದಿನಗಳ ಮಂಡಲೋತ್ಸವವನ್ನು ವೈಭವದಿಂದ ನೆರವೇರಿಸಿ ಉಡುಪಿ ಪೇಜಾವರ ಮಠಾಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಮಾ.17 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅವರಿಗೆ ಭವ್ಯ ಸ್ವಾಗತ ಕೋರಲು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರ ಸ್ವಾಗತ ಮತ್ತು ಅಭಿವಂದನ ಸಮಿತಿ -2024 ಸಿದ್ಧತೆ ನಡೆದಿದೆ.

ಅಂದು ಬೆಳಿಗ್ಗೆ 8.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಶ್ರೀಗಳನ್ನು ಸಂಸದ ನಳಿನ್ ಕುಮಾರ್ ಕಟೀಲ್, ವಿಹಿಂಪ ರಾಜ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ಡಾ.ಭರತ್ ಶೆಟ್ಟಿ , ಮಂಜುನಾಥ ಭಂಡಾರಿ, ಮೇಯರ್ ಸುರ್ ಶೆಟ್ಟಿ , ಕ್ಯಾ.ಬೃಜೇಶ್ ಚೌಟ, ಬಜರಂದದಳ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಸೇರಿದಂತೆ ಅನೇಕ ಗಣ್ಯರು ಸ್ವಾಗತಿಸಲಿದ್ದಾರೆ.

ಬಳಿಕ ವಿಮಾನ ನಿಲ್ದಾಣದ ಹೊರಭಾಗದ ಮುಖ್ಯರಸ್ತೆ ಯಿಂದ ಬಜ್ಪೆ ಜಂಕ್ಷನ್ -ಕಟೀಲು ದೇವಳದ ಬಳಿ – ಮುಲ್ಕಿ ಬಸ್ ಸ್ಟಾಂಡ್ ಬಳಿ – ಹೆಜಮಾಡಿ ಟೋಲ್ ಗೇಟ್ – ಕಾಪು ಹೊಸ ಮಾರಿಗುಡಿ ಬಳಿ – ಕಟಪಾಡಿ ಜಂಕ್ಷನ್ -ಉಡುಪಿ ಜೋಡುಕಟ್ಟೆಗಳಲ್ಲಿ ಗಣ್ಯರು ಸಂಘ ಸಂಸ್ಥೆಗಳ ಪ್ರಮುಖರು ಶ್ರೀಗಳನ್ನು ಸ್ವಾಗತಿಸುವರು. ವಿಮಾನ ನಿಲ್ದಾಣದಿಂದ ಜೋಡುಕಟ್ಟೆಯವರೆಗೆ ಮೇಲೆ ಸೂಚಿಸಿದ ಸ್ಥಳಗಳವರೆಗೆ ಸರದಿಯೋಪಾದಿಯಲ್ಲಿ ತಲಾ 50ಕ್ಕೂ ಅಧಿಕ ದ್ವಿಚಕ್ರ ವಾಹನಗಳಲ್ಲಿ ಜಾಥಾ ಮೂಲಕ ಶ್ರೀಗಳನ್ನು ಉಡುಪಿಗೆ ಬೀಳ್ಕೊಡುವರು.

ಬಳಿಕ ಉಡುಪಿ ಜೋಡುಕಟ್ಟೆಯಿಂದ ತೆರೆದ ವಾಹನದಲ್ಲಿ ಶ್ರೀಗಳನ್ನು ಕುಳ್ಳಿರಿಸಿ ಸುಮಾರು 100 ದ್ವಿಚಕ್ರ ವಾಹನಗಳ ಜಾಥಾದೊಂದಿಗೆ ಪೇಜಾವರ ಮಠ ಪ್ರವೇಶಿಸಲಿದ್ದಾರೆ. ಬಳಿಕ ಮಠದ ಶ್ರೀ ರಾಮ ವಿಠಲ ಸಭಾಭವನದಲ್ಲಿ 11.30 ಕ್ಕೆ ಶಾಸಕ ಯಶಪಾಲ್ ಎ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಸ್ವಾಮೀಜಿಯವರಿಗೆ ಅಭಿವಂದನೆ , ಸಾರ್ವಜನಿಕರಿಂದ ಮಾಲಾರ್ಪಣೆ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!