ಹೊಸದಿಗಂತ ಡಿಜಿಟಲ್ ಡೆಸ್ಕ್:
ಬದುಕಿನುದ್ದಕ್ಕೂ ಲೋಹದ ಸಿಲಿಂಡರ್ ಒಳಗೆಯೇ ಜೀವನ ನಡೆಸಿದ್ದ ಪೌಲ್ ಅಲೆಕ್ಸಾಂಡರ್ ತನ್ನ 78ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಜನಿಸಿದ ಕೆಲವೇ ವರ್ಷಗಳಲ್ಲಿ ಪೊಲೀಯೋಗೆ ತುತ್ತಾಗಿದ್ದ ಪೌಲ್, ಕುತ್ತಿಗೆ ಭಾಗದಲ್ಲಿ ಕಾಣಿಸಿಕೊಂಡ ಪಾರ್ಶ್ವವಾಯುವಿನಿಂದಾಗಿ ಉಸಿರಾಟ ಸಮಸ್ಯೆ ಎದುರಿಸಿದ್ದರು. ಇದಕ್ಕೆ ಪರಿಹಾರವಾಗಿ ವೈದ್ಯರು ದೇಹದ ಸುತ್ತ ಲೋಹದ ಸಿಲಿಂಡರ್ ಅಳವಡಿಸಿದ್ದು, ಇದೇ ಸ್ಥಿತಿಯಲ್ಲಿ ಕಾನೂನು ಪದವಿ ಪಡೆದು ವಕೀಲಿ ವೃತ್ತಿ ನಡೆಸಿದ್ದರು.
ಮುಂದೆ 1960ರಲ್ಲೇ ಲೋಹದ ಸಿಲಿಂಡರ್ ಮರೆಯಾಗಿ, ವೆಂಟಿಲೇಟರ್‌ಗಳು ಮಾರುಕಟ್ಟೆಗೆ ಬಂದವಾದರೂ, ಬಾಲ್ಯದಿಂದ ಬದುಕಿನ ಬಹುಪಾಲು ಕಾಲ ಲೋಹದ ಸಿಲಿಂಡರ್‌ಗೆ ಒಗ್ಗಿಕೊಂಡಿದ್ದರಿಂದ, ಅದರಿಂದ ಹೊರ ಬರಲು ಪೌಲ್ ನಿರಾಕರಿಸಿದ್ದರು. ಇವರ ಆತ್ಮ ಚರಿತ್ರೆ ಕೂಡಾ ಸಾಕಷ್ಟು ಸುದ್ದಿ ಮಾಡಿತ್ತು.
ಅತಿ ದೀರ್ಘಕಾಲದವರೆಗೆ ಲೋಹದ ಶ್ವಾಸಕೋಶ ಹೊಂದಿದ್ದ ವ್ಯಕ್ತಿ ಎಂಬ ಗಿನ್ನಿಸ್ ವಿಶ್ವ ದಾಖಲೆಯ ಗರಿಯೂ ಪೌಲ್ ಅವರ ಮುಡಿಯಲ್ಲಿದೆ.