ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಗೆ ಇನ್ನೇನು ದಿನಾಂಕ ಘೋಷಣೆ ಆಗುತ್ತಿದೆ. ಚುನಾವಣೆ ಘೋಷಣೆಯಾದ ಬೆನ್ನಿಗೇ ಜಾರಿಗೆ ಬರುವುದು ನೀತಿ ಸಂಹಿತೆ. ಈ ನೀತಿ ಸಂಹಿತೆ ನಿಯಮದಡಿ ಯಾವುದಕ್ಕೆಲ್ಲಾ ನಿರ್ಬಂಧ ಬೀಳುತ್ತದೆ ಎಂಬ ವಿವರ ಇಲ್ಲಿದೆ.
ಸರ್ಕಾರದ ಹಣ ಬಳಸುವಂತಿಲ್ಲ
ನೀತಿ ಸಂಹಿತೆ ಜಾರಿ ಬಳಿಕ ಯಾವುದೇ ರಾಜಕೀಯ ಪಕ್ಷಕ್ಕೆ ಲಾಭವಾಗುವಂತೆ ಸರ್ಕಾರದ ಹಣ ಬಳಸುವಂತಿಲ್ಲ. ಸರ್ಕಾರದ ಘೋಷಣೆ, ಉದ್ಘಾಟನೆ, ಶಂಕುಸ್ಥಾಪನೆ ಇವುಗಳಿಗೆ ಅವಕಾಶವಿಲ್ಲ. ಈಗಾಗಲೇ ಆರಂಭವಾಗಿರುವ ಕಾಮಗಾರಿ ಮುಂದುವರಿಸಬಹುದು.
ಅನುಮತಿ ಪಡೆಯುವುದು ಕಡ್ಡಾಯ
ಸಾರ್ವಜನಿಕ, ಖಾಸಗಿ ಸ್ಥಳದಲ್ಲಿ ಸಭೆ ಆಯೋಜಿಸುವ, ಮೆರವಣಿಗೆ ನಡೆಸುವ ಮತ್ತು ಧ್ವನಿವರ್ಧಕಗಳನ್ನು ಬಳಸುವ ಮೊದಲು ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಲಿಖಿತ ಅನುಮತಿ ಪಡೆಯುವುದು ಕಡ್ಡಾಯ. ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.
ಧಾರ್ಮಿಕ ಸ್ಥಳದಲ್ಲಿ ಪ್ರಚಾರ ಇಲ್ಲ
ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಸಹಿತ ಯಾವುದೇ ಧಾರ್ಮಿಕ ಸ್ಥಳಗಳನ್ನು ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ.
ವರ್ಗಾವಣೆ, ನಿಯುಕ್ತಿ ಇಲ್ಲ
ನೀತಿ ಸಂಹಿತೆಯ ಅಡಿಯಲ್ಲಿ, ಸರ್ಕಾರವು ಯಾವುದೇ ಸರ್ಕಾರಿ ಅಧಿಕಾರಿ, ಉದ್ಯೋಗಿಯನ್ನು ವರ್ಗಾಯಿಸಲು ಅಥವಾ ನಿಯುಕ್ತಿಗೊಳಿಸಲು ಅವಕಾಶ ಇಲ್ಲ. ವರ್ಗಾವಣೆ ಅಗತ್ಯ ಎಂದಿದ್ದಲ್ಲಿ ಚುನಾವಣಾ ಆಯೋಗದಿಂದ ಅನುಮತಿ ಪಡೆಯಬೇಕು.
ನೀತಿ ಸಂಹಿತೆ ಉಲ್ಲಂಘಿಸಿದರೆ ಏನಾಗುತ್ತದೆ?
ರಾಜಕೀಯ ಪಕ್ಷ, ಅಭ್ಯರ್ಥಿ ನೀತಿ ಸಂಹಿತೆ ಉಲ್ಲಂಘಿಸಿದರೆ, ಅವರನ್ನು ಪ್ರಚಾರದಿಂದ ನಿಷೇಧಿಸಲು, ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲು ಅವಕಾಶವಿದೆ. ಅಗತ್ಯವಿದ್ದಲ್ಲಿ ಅಭ್ಯರ್ಥಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಕೂಡಾ ದಾಖಲಿಸಬಹುದು, ಜೈಲಿಗೂ ಕಳಿಸಬಹುದು.