ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಮ್ಮೆಲ್ಲರ ಪ್ರೀತಿಯ, ಮರೆಯಲಾಗದ ಮಾಣಿಕ್ಯ ಅಪ್ಪು ಜನುಮ ದಿನ. ಮಧ್ಯರಾತ್ರಿಯಿಂದಲೇ ಸಾವಿರಾರು ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ಅವರ ಸ್ಮಾರಕಕ್ಕೆ ಆಗಮಿಸಿ ‘ಪರಮಾತ್ಮ’ನ ದರುಶನ ಪಡೆದಿದ್ದಾರೆ. ಇನ್ನು ನಟ ಯುವರಾಜ್ ಕುಮಾರ್ ಅವರು ಪುನೀತ್ ರಾಜ್ ಕುಮಾರ್ ಸ್ಮಾರಕಕ್ಕೆ ಭೇಟಿ ನೀಡಿ ದರುಶನ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಪುನೀತ್ ಅವರ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳು ವಿಶೇಷವಾಗಿ ತಂದಿದ್ದ ಅಪ್ಪಾ ಪುತ್ಥಳಿಯನ್ನು ಅನಾವರಣಗೊಳಿಸಿದರು.
ಎಲ್ಲೆಲ್ಲಿ ‘ಪುನಿತೋತ್ಸವ’ ಸಂಭ್ರಮ
ಚಿಕ್ಕಬಳ್ಳಾಪುರದಲ್ಲಿ ಕಲಾವಿದರೊಬ್ಬರು ಕೇವಲ ಎರಡೇ ನಿಮಿಷದಲ್ಲಿ ಪುನೀತ್ ಅವರ ಭಾವ ಚಿತ್ರವನ್ನು ಬಿಡಿಸಿದ್ದಾರೆ. ವಿಜಯಪುರದ ದೇವನಹಳ್ಳಿಯ ವಿದ್ಯಾರ್ಥಿ ಪ್ರಜ್ವಲ್ ಪೆನ್ಸಿಲ್ ಆರ್ಟ್, ಸ್ಪಾಟ್ ಆರ್ಟಿಸ್ಟ್ ಬಳಸಿ ಎರಡು ನಿಮಿಷದಲ್ಲಿ ಚಿತ್ರವನ್ನು ಬಿಡಿಸಿ ಅಚ್ಚರಿ ಮೂಡಿಸಿದ್ದಾರೆ.
ಅಮೇರಿಕದ ನ್ಯೂಯಾರ್ಕ್ನ ಟೈಂ ಸ್ಕೇರ್ನಲ್ಲಿ ಅಪ್ಪುಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಪುನೀತ್ ರಾಜ್ ಕುಮಾರ್ ಹಾಗೂ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಇರೋ ಭಾವಚಿತ್ರ ಹಾಕಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಅಪ್ಪು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಡೀ ಕರುನಾಡಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಅಪ್ಪು ನಮ್ಮ ಜೊತೆ ದೈಹಿಕವಾಗಿ ಇಲ್ಲದಿದ್ದರೂ ಅಸಂಖ್ಯಾತ ಅಭಿಮಾನಿಗಳ ಹೃದಯದಲ್ಲಿ ಪರಮಾತ್ಮನಾಗಿ ವಿರಾಜಮಾನರಾಗಿದ್ದಾರೆ. ಜೊತೆಗಿರದ ಜೀವ ಎಂದಿಗೂ ಜೀವಂತ ಅನ್ನೋ ರೀತಿ ಅಭಿಮಾನಿಗಳ ಆರಾಧ್ಯದೈವ ಎಂದಿಗೂ ಕನ್ನಡಿಗರ ಹೃದಯದಲ್ಲಿ ಅಜರಾಮರ.