ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಶಿವಮೊಗ್ಗ ಜಿಲ್ಲೆಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ಬಂಡಾಯ ಘೋಷಣೆ ಮಾಡಿರುವ ಕೆಎಸ್ ಈಶ್ವರಪ್ಪ ಅವರ ಮನವೊಲಿಸುವಲ್ಲಿ ಬಿಜೆಪಿ ನಾಯಕರು ವಿಫಲರಾಗಿದ್ದಾರೆ.
ಬಿಜೆಪಿ ನಾಯಕರು ತಮ್ಮ ನಿವಾಸದಿಂದ ವಾಪಸಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಮೋದಿ ಅವರ ಪರ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇನೆ. ಆದರೆ, ನಾನು ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಆರಗ ಜ್ಞಾನೇಂದ್ರ ಮತ್ತಿತರರು ಕೂಡ ಇಂದು ನಿವಾಸಕ್ಕೆ ಬಂದಿದ್ದರು. ಆದರೆ, ಯಾವುದೇ ಕಾರಣಕ್ಕೂ ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕೆಎಸ್ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ನನ್ನ ಮಗನಿಗೆ ಟಿಕೆಟ್ ಸಿಗದಿದ್ದಕ್ಕೆ ನನ್ನ ತಕರಾರು ಇಲ್ಲ. ಅನೇಕ ಹಿಂದುತ್ವವಾದಿಗಳಿಗೆ ಪಕ್ಷದಿಂದ ವಂಚನೆಯಾಗಿದೆ. ಯಡಿಯೂರಪ್ಪ ಕುಟುಂಬದ ಹಿಡಿತದಲ್ಲಿ ಬಿಜೆಪಿ ಇದೆ. ಲಿಂಗಾಯತ ರಾಜ್ಯಾಧ್ಯಕ್ಷರೇ ಬೇಕು ಎಂದು ಬಯಸಿದ್ದರೆ ಯತ್ನಾಳ್ ಅವರನ್ನ ರಾಜ್ಯಾಧ್ಯಕ್ಷರನ್ನಾಗಿ ಮಾಡಬಹುದಿತ್ತು. ಆದರೆ ಯಾಕೆ ಹಾಗೆ ಮಾಡಲಿಲ್ಲ? ಲಿಂಗಾಯತರು ಬೆಳೆಯುವುದು ಅವರಿಗೆ ಇಷ್ಟವಿಲ್ಲ ಸರಿ. ಕನಿಷ್ಠ ಒಕ್ಕಲಿಗ ನಾಯಕರನ್ನಾದರೂ ಮಾಡಬಹುದಿತ್ತು. ಯಾಕೆ ಮಾಡಿಲ್ಲ ಎಂದು ಯಡಿಯೂರಪ್ಪ ಅವರನ್ನು ಈಶ್ವರಪ್ಪ ಪ್ರಶ್ನಿಸಿದ್ದಾರೆ.