Sunday, January 11, 2026

ರಾಜ್ಯದಲ್ಲಿ ಚಳಿ ಜತೆಗೆ ಮಳೆ ಕೂಡ ಸೇರ್ಕೊಂಡಿದೆ: ಹೊರಗಡೆ ಹೋಗೋವಾಗ ಛತ್ರಿ ಮರಿಬೇಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಮುಂದಿನ ಕೆಲ ದಿನಗಳು ಹವಾಮಾನದಲ್ಲಿ ಸ್ಪಷ್ಟ ಬದಲಾವಣೆ ಕಾಣಿಸಿಕೊಳ್ಳಲಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಮತ್ತು ಚಳಿ ಎರಡೂ ಸೇರಿ ಜನರಿಗೆ ತೊಂದರೆ ನೀಡುವ ಸಾಧ್ಯತೆ ಇದೆ. ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಚಳಿ ತೀವ್ರವಾಗುವ ಲಕ್ಷಣಗಳು ಕಂಡುಬಂದಿವೆ.

ಬೆಂಗಳೂರು ನಗರದಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ತಾಪಮಾನ ಗಣನೀಯವಾಗಿ ಇಳಿಕೆಯಾಗಲಿದೆ. ಆರಂಭದಲ್ಲಿ ಎರಡು ದಿನ ಮೋಡ ಮುಸುಕಿದ ವಾತಾವರಣ ಇರಲಿದ್ದು, ಮಧ್ಯಮ ಪ್ರಮಾಣದ ಮಳೆಯ ಸಾಧ್ಯತೆಯೂ ಇದೆ ಎಂದು ಇಲಾಖೆ ತಿಳಿಸಿದೆ. ಜನವರಿ 9 ಮತ್ತು 10ರಂದು ನಗರದಲ್ಲಿ ಮಳೆಯಾಗುವ ಸಂಭವ ಹೆಚ್ಚಿದೆ.

ಇದನ್ನೂ ಓದಿ: Kitchen tips | ಚಳಿಗಾಲದಲ್ಲಿ ದೋಸೆ-ಇಡ್ಲಿ ಹಿಟ್ಟು ಹುದುಗಿಸುವ ಸೂಪರ್ ಸೀಕ್ರೆಟ್ ಟ್ರಿಕ್ಸ್ ಇಲ್ಲಿದೆ!

ಇನ್ನೊಂದೆಡೆ ಉತ್ತರ ಕರ್ನಾಟಕ ಭಾಗದಲ್ಲಿ ಮುಂದಿನ ಐದು ದಿನ ಚಳಿ ಹೆಚ್ಚಳವಾಗಲಿದೆ. ಬೆಳಿಗ್ಗೆ ಹಾಗೂ ರಾತ್ರಿ ಸಮಯದಲ್ಲಿ ತೀವ್ರ ಚಳಿಯಿಂದ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಕರಾವಳಿ ಪ್ರದೇಶಗಳು ಮತ್ತು ದಕ್ಷಿಣ ಒಳನಾಡಿನಲ್ಲೂ ಚಳಿ ಮುಂದುವರಿಯಲಿದ್ದು, ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಹವಾಮಾನ ಬದಲಾವಣೆಗೆ ಪ್ರಮುಖ ಕಾರಣ ಆಗ್ನೇಯ ಅರೇಬಿಯನ್ ಸಮುದ್ರ ಹಾಗೂ ಕೇರಳ ಕರಾವಳಿ ಸಮೀಪ ಚಂಡಮಾರುತ ಸೃಷ್ಟಿಯಾಗುತ್ತಿರುವುದನ್ನು ಇಲಾಖೆ ಉಲ್ಲೇಖಿಸಿದೆ. ಸಮುದ್ರಮಟ್ಟದಿಂದ ಸುಮಾರು 0.9 ಕಿಲೋಮೀಟರ್ ಎತ್ತರದಲ್ಲಿ ಈ ಚಂಡಮಾರುತ ರೂಪುಗೊಳ್ಳಲಿದೆ. ಇದರ ಪರಿಣಾಮವಾಗಿ ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

error: Content is protected !!