ಹೊಸದಿಗಂತ ವರದಿ, ಮೈಸೂರು:
ನಮ್ಮ ಅರಮನೆಯ ಆಸ್ತಿಯನ್ನು ಉಳಿಸಿಕೊಳ್ಳಲೆಂದು ನಾನು ರಾಜಕೀಯಕ್ಕೆ ಬಂದಿಲ್ಲ. ಜನರ ಕೆಲಸ ಮಾಡಲೆಂದು ಬಂದಿದ್ದೇನೆ. ಅರಮನೆಯ ಆಸ್ತಿಯ ವಿಚಾರವಾಗಿ ನಮ್ಮ ತಾಯಿಯವರು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಾರೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಸೋಮವಾರ ನಗರದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಘಟಕದಿಂದ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದ, ಸಂಕಲ್ಪ ಪತ್ರಕ್ಕೆ ನಿಮ್ಮ ಸಲಹೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಬೆಂಗಳೂರಿನ ಅರಮನೆಯನ್ನು ತ್ವರಿತವಾಗಿ ವಶಪಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಆದೇಶಿಸಿರುವುದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಬೆಂಗಳೂರು ಅರಮನೆಯ ವಿಚಾರ ಕಾನೂನು ಹೋರಾಟದ ವ್ಯಾಪ್ತಿಯಲ್ಲಿದೆ. ಅದರಲ್ಲಿ ನನ್ನ ಪಾತ್ರವೇನೂ ಇಲ್ಲ. ಆಸ್ತಿಯೆಲ್ಲವೂ ನನ್ನ ತಾಯಿಯವರ ಹೆಸರಿನಲ್ಲಿದೆ. ಹಾಗಾಗಿ ಅವರು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಮುಂದೆಯೂ ಮುಂದುವರಿಸುತ್ತಾರೆ.ನಾನು ಅರಮನೆಯ ಆಸ್ತಿ ಉಳಿಸಿಕೊಳ್ಳಲೆಂದು ರಾಜಕಾರಣಕ್ಕೆ ಬಂದಿದ್ದೇನೆ ಎಂಬುದು ಸರಿಯಲ್ಲ. ನಾನು ರಾಜಕೀಯಕ್ಕೆ ಬಂದಿರುವುದಕ್ಕೂ, ಅರಮನೆಯ ಆಸ್ತಿಯ ವಿಷಯಕ್ಕೂ ಯಾವುದೇ ಸಂಬoಧವಿಲ್ಲ ಎಂದು ಸ್ಪಷ್ಟಪಡಿಸಿದರು.
ತಾಯಿಯ ಆರ್ಶೀವಾದ, ಸಲಹೆ ಪಡೆದೇ ರಾಜಕೀಯಕ್ಕೆ ಬಂದಿದ್ದೇನೆ. ಅವರು ನನ್ನ ಪರವಾಗಿ ಪ್ರಚಾರಕ್ಕೆ ಬರುವ ಅವಶ್ಯಕತೆಯಿಲ್ಲ. ಬಡವರ ಮಕ್ಕಳೂ ಬೆಳೆಯಬೇಕು ಎಂಬುದು ನಿಜ. ಆದರೆ ನಾನು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು ಪಕ್ಷದ ತೀರ್ಮಾನವಾಗಿದೆ ಎಂದರು.