ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೋಗ ಗುರು ಬಾಬಾ ರಾಮ್‌ದೇವ್, ಪತಂಜಲಿ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ಅವರಿಗೆ ಸಮನ್ಸ್ ಜಾರಿ ಮಾಡಿರುವ ಸುಪ್ರೀಂಕೋರ್ಟ್, ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗುವಂತೆ ಸೂಚಿಸಿದೆ.
ಶೋಕಾಸ್ ನೋಟಿಸ್‌ಗೆ ಉತ್ತರ ನೀಡದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್, ನಮ್ಮ ಆದೇಶಗಳನ್ನು ನಿರ್ಲಕ್ಷ್ಯಿಸಿದ್ದೀರಿ. ಬಾಬಾ ರಾಮ್‌ದೇವ್, ಪತಂಜಲಿ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಸೂಚಿಸಿತು.
ಈ ವೇಳೆ ಪತಂಜಲಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೊಹ್ಟಗಿ ರಾಮದೇವ್ ಪ್ರಕರಣಕ್ಕೆ ಸಂಬಂಧಿಸಿಲ್ಲ. ಅವರಿಗೆ ಯಾಕೆ ಸಮನ್ಸ್ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ ನೀವೂ ವಿಚಾರಣೆ ಹಾಜರಾಗುತ್ತಿದ್ದೀರಿ, ಹಾಜರಾಗಬೇಕು ಎಂದಷ್ಟೆ ಹೇಳಿತು.
ತಪ್ಪು ಮಾಹಿತಿಯೊಂದಿಗೆ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿ ಪತಂಜಲಿ ವಿರುದ್ಧ ಭಾರತೀಯ ವೈದ್ಯಕೀಯ ಸಂಸ್ಥೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿ ವಿಚಾರಣೆ ಇದಾಗಿದೆ.