ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತೂ ಕಾಂಗ್ರೆಸ್ ಟಿಕೆಟ್ ಗೊಂದಲ ಮುಗಿದಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದೇ ಫೈನಲ್ ಆಗಿರಲಿಲ್ಲ. ಗುರುವಾರ ಕೈ ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ, ಯುವ ವಕೀಲ ಪದ್ಮರಾಜ್ ದ.ಕ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಎಂಬ ಪುಟ್ಟ ಗ್ರಾಮದಲ್ಲಿ ಮಂಗಳೂರು ಮೂಲದ ಎಚ್.ಎಂ.ರಾಮಯ್ಯ ಮತ್ತು ಲಲಿತಾ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ ಪದ್ಮರಾಜ್ ರಾಮಯ್ಯರವರು ತನ್ನ ಅಣ್ಣ ಮಂಗಳೂರಿನ ಹೆಸರಾಂತ ಹೃದಯ ರೋಗ ತಜ್ಞ ಡಾ. ಪುರುಷೋತ್ತಮ ಆರ್ ರವರಂತೆ ಬಾಲ್ಯದಿಂದಲೇ ಪ್ರತಿಭಾನ್ವಿತ.
ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಗಿಸಿ ಮುಂದೆ ಬಿ.ಎ ಪದವಿಯನ್ನು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು ಹಾಗೂ ಕಾನೂನು ಪದವಿಯನ್ನು ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಮುಗಿಸಿದರು. 1995ರಿಂದ ಕಾನೂನು ವೃತ್ತಿಯ ಚೊಚ್ಚಲ ಅಭ್ಯಾಸವನ್ನು ಕೇಂದ್ರದ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿಯವರೊಂದಿಗೆ ಪ್ರಾರಂಭಿಸಿದ್ದರು.
ಕಳೆದ 25 ವರ್ಷದಿಂದ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಪದ್ಮರಾಜ್ ಅವರು ಬಿ.ಜನಾರ್ದನ ಪೂಜಾರಿಯವರ ಅಪ್ಪಟ ಅನುಯಾಯಿ.