ಹೊಸದಿಗಂತ, ಮಂಗಳೂರು:
ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಮಾಡಿರುವ ಭಾಷೆಯ ಕುರಿತಾದ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ,
ಸಂಸದನಾದ ಆರೇ ತಿಂಗಳಿನ ಒಳಗೆ ಸಂಸತ್ತಿನಲ್ಲಿ ಭಾಷಣ ಮಾಡಿ ಎಲ್ಲರನ್ನು ಖುಷಿ ಪಡಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಭಾಷೆ ಎಂಬುದು ಬದುಕಿನ ಅವಿಭಾಜ್ಯ ಅಂಗ. ನನ್ನ ಹಿರಿಯರು ನನ್ನ ಭಾಷೆ ಬಗ್ಗೆ ಕಾಳಜಿಯ ಮಾತನ್ನು ಆಡಿದ್ದಾರೆ. ಅದನ್ನು ನಾನು ಗೌರವಿಸುತ್ತೇನೆ. ಸಂಸತ್ತಿನಲ್ಲಿ ಭಾಷಣ ಮಾಡುವ ಮೂಲಕ ಮತದಾರರು ಮತ್ತು ಹಿರಿಯರನ್ನು ಖುಷಿ ಪಡಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯನ್ನು ಅವರ ಆಡಳಿತ ಶೈಲಿಯಿಂದ ಇಂದು ವಿಶ್ವವೇ ಗೌರವಿಸುತ್ತದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮೂಲಕ ನರೇಂದ್ರ ಮೋದಿಯವರು ಪ್ರಧಾನಿಯಾಗಲು ನಾನು ಕೈಜೋಡಿಸುತ್ತಿದ್ದೇನೆ. ಅದಕ್ಕೆ ಅವಕಾಶ ಮಾಡಿ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡುತ್ತೇನೆ ಎಂದರು.
ಪ್ರಜಾಪ್ರಭುತ್ವದಲ್ಲಿ ಒಬ್ಬ ಅಭ್ಯರ್ಥಿ ಗೆದ್ದರೆ ಸಂಸತ್ತು ನಡೆಸಲು ಆಗುವುದಿಲ್ಲ. ನಾಯಕತ್ವದ ಪ್ರಶ್ನೆ ಎದುರಾದಾಗ ನರೇಂದ್ರ ಮೋದಿಯವರ ನಾಯಕತ್ವವನ್ನು ನಾವು ಪ್ರಚಾರ ಮಾಡುತ್ತೇವೆ. ಟೀಕಿಸುವವರು ಅವರ ನಾಯಕತ್ವದ ಬಗ್ಗೆ ಮಾತನಾಡಲಿ. ನಾಲ್ಕು ಬಾರಿ ಎಂಎಲ್ ಸಿ ಯಾಗಿ, ಮಂತ್ರಿಯಾಗಿ ಹಲವಾರು ಬದಲಾವಣೆಗಳನ್ನು ತಂದಿದ್ದೇನೆ. ಪರಿಣಾಮಕಾರಿ ಕೆಲಸ ಮಾಡುವ ಅನುಭವ ನನಗೆ ಇದೆ. ಹೀಗಾಗಿ ಸಂಸದನಾಗಿ ಕೂಡಾ ದಾಖಲೆಯ ಅಭಿವೃದ್ದಿಯನ್ನು ನಾನು ಮಾಡಬಲ್ಲೆ ಎಂಬ ವಿಶ್ವಾಸವಿದೆ. ನಾನು ಎಂದೂ ವ್ಯಕ್ತಿ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.