5,8,9ನೇ ಪಬ್ಲಿಕ್‌ ಪರೀಕ್ಷೆಗೆ ಮತ್ತೆ ಕಂಟಕ?: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ‘ರುಪ್ಸಾ’ ಪ್ಲಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

5,8 ಮತ್ತು 9ನೇ ತರಗತಿ ಪಬ್ಲಿಕ್‌ ಪರೀಕ್ಷೆಗೆ (Public Exam) ಮತ್ತೆ ಕಂಟಕ ಎದುರಾಗುವ ಸಾಧ್ಯತೆ ಕಾಣುತ್ತಿದೆ . ಇಂದು ಪಬ್ಲಿಕ್‌ ಪರೀಕ್ಷೆ ಮುಂದುವರಿಸಲು ರಾಜ್ಯ ಹೈಕೋರ್ಟ್‌ (Karnataka High Court) ಗ್ರೀನ್‌ ಸಿಗ್ನಲ್‌ (Karnataka High Court Green Signal) ನೀಡಿತ್ತು. ಆದ್ರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ‘ರುಪ್ಸಾ’ ಈ ಆದೇಶ ಪ್ರಶ್ನಿಸಿ ಮತ್ತೆ ಸುಪ್ರೀಂಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದೆ.

ಹೀಗಾಗಿ ಮತ್ತೆ ಸುಪ್ರೀಂಕೋರ್ಟ್‌ ಏನು ಮಾಡಲಿದೆ ಎನ್ನುವುದರ ಆಧಾರದಲ್ಲಿ ಪರೀಕ್ಷೆ ಭವಿಷ್ಯ ನಿಂತಿದೆ.

ಶುಕ್ರವಾರ ಬೆಳಗ್ಗೆಯಷ್ಟೇ ನ್ಯಾ. ಸೋಮಶೇಖರ್ ಹಾಗೂ ನ್ಯಾ.ರಾಜೇಶ್ ರೈ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಬೋರ್ಡ್ ಎಕ್ಸಾಂಗೆ ಅಸ್ತು ಎಂದಿತ್ತು. ಸೋಮವಾರದಿಂದ ಪರೀಕ್ಷೆ ಮರು ಆರಂಭಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಸರ್ಕಾರ ಕೋರ್ಟ್‌ಗೆ ಹೇಳಿತ್ತು.

5, 8 ಮತ್ತು 9ನೇ ತರಗತಿಯ ಉಳಿದ ಪರೀಕ್ಷೆಗಳನ್ನು ಸೋಮವಾರದಿಂದಲೇ ನಡೆಸುವ ಬಗ್ಗೆ ಕೋರ್ಟ್ ಗೆ ಸರ್ಕಾರ ಮಾಹಿತಿ ನೀಡಿದೆ. ಈಗಾಗಲೇ ಐದನೇ ತರಗತಿ ನಾಲ್ಕು ವಿಷಯಗಳ‌ ಪರೀಕ್ಷೆ ಮುಗಿದಿವೆ. 8 ಹಾಗೂ 9 ತಗರತಿಗಳ ಎರಡೆರಡು ವಿಷಯಗಳ ಪರೀಕ್ಷೆ ನಡೆದಿವೆ. 11ನೇ ತರಗತಿ ಎಲ್ಲಾ ವಿಷಯಗಳ‌ ಪರೀಕ್ಷೆ ಮುಕ್ತಾಯವಾಗಿದೆ.

ಈ ನಡುವೆ, ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ (RUPSA) ನಿರ್ಧರಿಸಿದೆ.

ಹೈಕೋರ್ಟ್ ವಿಭಾಗೀಯ ಪೀಠದ ಆದೇಶವನ್ನು ನಾವು ಗೌರವಿಸುತ್ತೇವೆ. ಆದರೆ ತೃಪ್ತಿ ತಂದಿಲ್ಲ. ಎಂದು ಹೇಳಿರುವ RUPSA ಅಧ್ಯಕ್ಷ ಲೋಕೇಶ್ ತಾಳಿಕಟ್ಟಿ ಅವರು, ಈ ಬಾರಿ ನಡೆಯುತ್ತಿರುವ ಬೋರ್ಡ್ ಪರೀಕ್ಷೆಗಳನ್ನುಮುಗಿಸಿ, ಮುಂದಿನ ವರ್ಷದಿಂದ ಸೂಕ್ತ ತೀರ್ಮಾನ ತೆಗೆದುಕೊಳ್ಳಿ ಎಂದು ವಿಭಾಗೀಯ ಪೀಠ ಹೇಳಿದೆ. ಆದರೆ ಈ ಬಾರಿ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿದೆ. ಹೀಗಾಗಿ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡಿದ್ದೇವೆ. ಸಾಕಷ್ಟು ಮಂದಿ ಪೋಷಕರು ಸಹ ಈ ಬಗ್ಗೆ ನಮಗೆ ಒತ್ತಾಯ ಮಾಡಿದ್ದಾರೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!