ಹೊಸದಿಗಂತ, ಕುಶಾಲನಗರ:
ದನಕರುಗಳ ಮೇವಿಗೆಂದು ಸಂಗ್ರಹಿಸಿಟ್ಟಿದ್ದ ಭತ್ತದ ಹುಲ್ಲಿನ ಮೆದೆಗೆ ಬೆಂಕಿ ತಗುಲಿ ಹಾನಿಯಾದ ಘಟನೆ ಹುಲುಸೆ ಗ್ರಾಮದಲ್ಲಿ ನಡೆದಿದೆ.
ಹುಲುಸೆ ಗ್ರಾಮದ ಕೃಷಿಕ ಹೆಚ್. ಎನ್. ನಾಗಣ್ಣ ಎಂಬವರಿಗೆ ಸೇರಿದ ಸುಮಾರು 50 ಸಾವಿರ ರೂ. ಮೌಲ್ಯದ ಹುಲ್ಲು ಬೆಂಕಿಗೆ ಆಹುತಿಯಾಗಿದೆ.
ಹುಲ್ಲಿನ ಮೆದೆಗೆ ಆವರಿಸಿದ ಬೆಂಕಿ ಸಮೀಪದ ಶರತ್ ಎಂಬವರಿಗೆ ಸೇರಿದ ಶುಂಠಿ ಬಿತ್ತನೆಯ ಹೊಲಕ್ಕೂ ವ್ಯಾಪಿಸಿದ್ದು, ಭತ್ತದ ಹುಲ್ಲು, ಜೋಳದ ಕಡ್ಡಿಯನ್ನು ಮುಚ್ಚಿದ್ದ ಪಟಗಳು ಬೆಂಕಿಗೆ ಆಹುತಿಯಾಗುತ್ತಿದ್ದಂತೆಯೇ ಸುತ್ತಲಿನ ಕೃಷಿಕರು ಬಂದು ಜಮೀನಿಗೆ ಅಳವಡಿಸಿದ್ದ ನೀರಿನ ಪೈಪ್ ಗಳ ಸಹಾಯದಿಂದ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದರು. ಆದರೆ ಅಷ್ಟರಲ್ಲೇ ಹುಲ್ಲಿನ ಮೆದೆ ಸಂಪೂರ್ಣ ಭಸ್ಮವಾಗಿತ್ತು.
ಅಲ್ಲೇ ಆಸುಪಾಸಿನಲ್ಲಿ ಭತ್ತದ ಒಕ್ಕಲುತನ ಮುಗಿದ ಬಳಿಕ ಭತ್ತದ ಜೆಳ್ಳಿನ ರಾಶಿಗೆ ಹಾಕಿದ್ದ ಬೆಂಕಿ ಗಾಳಿಗೆ ಸಿಲುಕಿ ಹುಲ್ಲಿನ ಮೆದೆಗೆ ತಗುಲಿರುವುದಾಗೊ ಕೃಷಿಕರೊಬ್ಬರು ಸ್ಥಳಕ್ಕೆ ತೆರಳಿದ್ದ ಸುದ್ಧಿಗಾರರಿಗೆ ತಿಳಿಸಿದರು.
ಪ್ರಕೃತಿ ವಿಕೋಪದಡಿ ಪರಿಹಾರ ನೀಡಬೇಕೆಂದು ನೊಂದ ಕೃಷಿಕ ನಾಗಣ್ಣ ಕಂದಾಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.