ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲಬೆರಕೆ ಮದ್ಯ ಸೇವಿಸಿ 21 ಮಂದಿ ಸಾವನ್ನಪ್ಪಿರುವ ಘಟನೆ ಪಂಜಾಬ್ನ ಹಾಡಿ ಸಂಗ್ರೂರ್ನಲ್ಲಿ ನಡೆದಿದೆ. ಮೆಥನಾಲ್ ಹೊಂದಿರುವ ಆಲ್ಕೋಹಾಲ್ ಸೇವನೆಯಿಂದಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮದ್ಯ ಸೇವಿಸಿದ 40ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಘಟನೆಯ ತನಿಖೆಗಾಗಿ ಪಂಜಾಬ್ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಸಂಗ್ರೂರ್ ಮುಖ್ಯ ವೈದ್ಯಕೀಯ ಅಧಿಕಾರಿ ಪ್ರಕಾರ, ಪಂಜಾಬ್ನ ಹಾಡಿ ಸಂಗ್ರೂರ್ ಜಿಲ್ಲೆಯ ನಿವಾಸಿಗಳು ಕಳೆದ ಬುಧವಾರ (ಮಾರ್ಚ್ 20) ಮದ್ಯ ಸೇವಿಸುತ್ತಿದ್ದರು. ಪರಿಣಾಮ ಒಂದೇ ದಿನ ನಾಲ್ವರು ಸಾವನ್ನಪ್ಪಿದ್ದಾರೆ. ಶನಿವಾರ (ಮಾರ್ಚ್ 23), ಇನ್ನೂ ಐವರು ಸಾವನ್ನಪ್ಪಿದರು, ಒಟ್ಟು ಸಾವಿನ ಸಂಖ್ಯೆ 21 ಕ್ಕೆ ಏರಿದೆ ಎನ್ನಲಾಗಿದ್ದು. ಸುಮಾರು 40 ಜನರು ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಸಂತ್ರಸ್ತರೆಲ್ಲರೂ ದಿನಗೂಲಿ ಕಾರ್ಮಿಕರು ಎಂದು ತಿಳಿದು ಬಂದಿದೆ. ಸಾವಿಗೆ ಮೆಥನಾಲ್ ಮತ್ತು ಮದ್ಯದ ಮಿಶ್ರಣವೇ ಕಾರಣ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.