ಲಕ್ಷಾಂತರ ಭಕ್ತರ ಸಮಕ್ಷಮದಲ್ಲಿ ಚೆಲುವನಾರಾಯಣಸ್ವಾಮಿಯ ಮಹಾರಥೋತ್ಸವ

ಹೊಸದಿಗಂತ ವರದಿ,ಮೇಲುಕೋಟೆ:

ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಲಕ್ಷಾಂತರ ಭಕ್ತರ ಸಮಕ್ಷಮದಲ್ಲಿ ಚೆಲುವನಾರಾಯಣಸ್ವಾಮಿಯವರ ಮಹಾರಥೋತ್ಸವ ಭಾನುವಾರ ವೈಭವದಿಂದ ನೆರವೇರಿತು.

ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ತೇರೊಪ್ಪತ್ತಿನ ಉಪವಾಸ ಮಾಡಿ ರಥದರ್ಶನ ಮಾಡಿ ಹರಕೆ ಪೂರೈಸಿದರು.ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಪುತ್ರ ಸಚಿನ್. ದರ್ಶನ್ ಪುಟ್ಟಣ್ಣಯ್ಯ ಸಹೋದರ ರಾಘು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಸೇರಿದಂತೆ ಹಲವು ಗಣ್ಯರು ರಥೋತ್ಸವದಲ್ಲಿ ಭಾಗಿಯಾಗಿದ್ದರು.

ಮಹಾರಥೋತ್ಸವದ ಪ್ರಯುಕ್ತ ದೇವಾಲಯದ ಪೂಜಾಕೈಂಕರ್ಯವನ್ನು ಬೆಳಗಿನ 6 ಗಂಟೆಗೆ ಆರಂಭಿಸಲಾಯಿತು. ರಥಬಲಿ ಬಲಿಪ್ರದಾನದ ನಂತರ ಅಮ್ಮನವರ ಸನ್ನಿಧಿಯ ಬಳಿ ಬೆಳಿಗ್ಗೆ 8 ಗಂಟೆಯವೇಳೆಗೆ ಯಾತ್ರಾದಾನ ನೆರವೇರಿಸಲಾಯಿತು. ನಂತರ 9-15 ರ ವೇಳೆಗೆ ವೇದಪಾರಾಯಣ ಹಾಗೂ ಮಂಗಳವಾದ್ಯದೊಂದಿಗೆ ಶ್ರೀದೇವಿ ಭೂದೇವಿ ಕಲ್ಯಾಣನಾಯಕಿಯರೊಂದಿಗೆ ವಜ್ರಖಚಿತ ರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವ ಒಳಪ್ರಾಕಾರ ಮತ್ತು ಹೊರಪ್ರಾಕಾದರಲ್ಲಿ ನಡೆದ ನಂತರ ರಥಮಂಟಪ ತಲುಪಿತು. ರಥಮಂಟಪಕ್ಕೆ ಮೂರು ಪ್ರದಕ್ಷಿಣೆ ಪೂರೈಸಿದ ನಂತರ ಜೋಯಿಸರ ಮಹೂರ್ತಪಠಣದ ತರುವಾಯ ರಥಾರೋಹಣ ನೆರವೇರಿಸಲಾಯಿತು.

ಮಹಾರಥದಲ್ಲಿ ಲೋಕಕಲ್ಯಾಣಾರ್ಥವಾಗಿ ಮಳೆ-ಬೆಳೆ ಉತ್ತಮವಾಗಿ ಆಗಿ ನಾಡಿನಲ್ಲಿ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿ ವಿಶೇಷಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. 11-30ರವೇಳೆಗೆ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಚತುರ್ವೀದಿಗಳಲ್ಲಿ ಸಡಗರ ಸಂಭ್ರಮದಿಂದ ಸಂಚರಿಸಿ 3 ಗಂಟೆಗೆ ಮುಕ್ತಾಯವಾಯಿತು .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!