ಹೊಸದಿಗಂತ ವರದಿ,ಬೆಳಗಾವಿ:
ಭಗವಾಧ್ವಜ, ಶ್ರೀರಾಮ ಎಂದರೆ ಕಾಂಗ್ರೆಸ್ ನಾಯಕರಿಗೆ ಅಷ್ಟಕಷ್ಟೆ. ಆದರೆ, ಇದು ಹೇಳಿ ಕೇಳಿ ಲೋಕಸಭಾ ಚುನಾವಣೆ ಸಂದರ್ಭ. ಹೀಗಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಶ್ರೀರಾಮ ನೆನಪಾಗಿದ್ದಾನೆ.
ಅಷ್ಟೇ ಅಲ್ಲ, ಪುತ್ರ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಅವರು ಚುನಾವಣಾ ಪ್ರಚಾರಾರ್ಥ ಭಾನುವಾರ ನಗರದಲ್ಲಿ ನಡೆಸಿದ ಬೈಕ್ ರ್ಯಾಲಿಯಲ್ಲಿ ಸಂಪೂರ್ಣವಾಗಿ ಭಗವಾ ಧ್ವಜಗಳೇ ಹಾರಾಡಿದ್ದು ವಿಶೇಷವಾಗಿತ್ತು.
ನಗರದಲ್ಲಿ ಮಹಾ ಪುರುಷರ ಪುತ್ಥಳಿಗಳಿಗೆ ಮಾಲಾರ್ಪಣೆಯೊಂದಿಗೆ ಆರಂಭವಾದ ಬೈಕ್ ರ್ಯಾಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತ್ತು. ಆದರೆ, ರ್ಯಾಲಿ ತುಂಬ ಕಾಂಗ್ರೆಸ್ ಪಕ್ಷದ ಧ್ವಜಗಳಿಗಿಂತ ಭಗವಾ ಧ್ವಜಗಳೇ ಹೆಚ್ಚಿಗೆ ಹಾರಾಡಿದವು.
ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೇರಿದಂತೆ ಬಹುತೇಕ ಕೊರಳಲ್ಲಿ ಭಗವಾ ಶಾಲುಗಳೂ ಕಂಗೊಳಿಸಿದ್ದು ವಿಶೇಷವಾಗಿತ್ತು. ಹೀಗಾಗಿ, ಇದೊಂದು ರೀತಿಯಲ್ಲಿ `ಮತಗಳ ಮೇಲೆ ಆಸೆ, ಭಗವಾನ್ ಮೇಲೆ ಪ್ರೀತಿ’ ಎಂದು ಅಕ್ಕಿ ಮೇಲಿನ ಆಸೆ, ನೆಂಟರ ಮೇಲೆ ಪ್ರೀತಿ ಎನ್ನುವ ಗಾದೆ ಮಾತಿಗೆ ಹೋಲಿಕೆ ಮಾಡಿದ್ದು ಜನಸಾಮಾನ್ಯರಿಂದ ಕೇಳಲು ಸಿಕ್ಕಿತು.
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಭಾಳಕರ್, ನಾನೂ ಶ್ರೀರಾಮನ ಭಕ್ತೆ. ನಾನೂ ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಟ್ಟಿದ್ಧೇನೆ ಎಂದು ಹೇಳಿದ್ದು ಗಮನ ಸೆಳೆಯಿತು.