ಕೋಲಾರದ ಕಾಂಗ್ರೆಸ್ ಗದ್ದಲಕ್ಕೆ ತೆರೆ: ಸಂಧಾನ ಸಭೆ ಯಶಸ್ವಿ, ಟಿಕೆಟ್ ಯಾರಿಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಕಾಂಗ್ರೆಸ್ ನಲ್ಲಿ ಉಂಟಾದ ಕೋಲಾರ ಗದ್ದಲಕ್ಕೆ ತೆರೆ ಬಿದ್ದಿದೆ. ಕೋಲಾರ ಲೋಕಸಭಾ(Kolar Loksabha Ticket) ಕ್ಷೇತ್ರದಲ್ಲಿ ಸಚಿವ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವಿನ ಗುದ್ದಾಟ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಇಂದು(ಮಾರ್ಚ್ 28) ಮುಖ್ಯಮಂತ್ರಿ ಅವರ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ಸಿಎಂ, ಡಿಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಭೆ ಬಳಿಕ ಸಿಎಂ ನಿವಾಸ ಕಾವೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಸಿ.ಸುಧಾಕರ್, ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಸರಿಪಡಿಸುವುದಾಗಿ ತಿಳಿಸಿದ್ದಾರೆ. ಸಿಎಂ, ಡಿಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ನಮ್ಮಿಂದ ಪಕ್ಷಕ್ಕೆ ಹಾನಿಯಾಗಲು ಅವಕಾಶ ನೀಡುವುದಿಲ್ಲ. ಪಕ್ಷದ ಆದೇಶಕ್ಕೆ ಗೌರವ ಕೊಟ್ಟು ಅವರು ಹೇಳಿದಂತೆ ನಡೆದುಕೊಳ್ಳುತ್ತೇವೆ. ನಿನ್ನೆ(ಮಾರ್ಚ್ 28) ಆದಂತ ಸಮಸ್ಯೆ ಬಗ್ಗೆ ಸಿಎಂ, ಡಿಸಿಎಂ ಬಳಿ ಹೇಳಿಕೊಂಡಿದ್ದೇವೆ. ರಾಜೀನಾಮೆ ನೀಡಲು ಮುಂದಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.

ನಾವು ಕ್ಷಮೆ ಕೇಳಿದ್ದೇವೆ, ಯಾವುದೇ ಅಭ್ಯರ್ಥಿ ಬಗ್ಗೆ ಚರ್ಚೆ ಆಗಿಲ್ಲ. ಆದ್ರೆ ಯಾರಿಗೆ ಟಿಕೆಟ್ ಕೊಟ್ರೂ ಒಂದಾಗಿ ಕೆಲಸ ಮಾಡ್ತೀವಿ. ನಮ್ಮ ಜಗಳ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆ ಲಾಭ ಆಗಲ್ಲ. ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿರುವ ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಿಎಂ ಹಾಗೂ ಡಿಸಿಎಂ ಸಭೆ ಕರೆದ ಸಭೆಯಲ್ಲಿ ಕೋಲಾರ ಜಿಲ್ಲೆಯ ಪಕ್ಷದ ಎಲ್ಲಾ ಶಾಸಕರೂ ಭಾಗವಹಿಸಿದ್ದು, ಸಂಧಾನ ಸಭೆ ಯಶಸ್ವಿಯಾಗಿದೆ. ಹೈಕಮಾಂಡ್ ಆದೇಶಕ್ಕೆ ಬದ್ದ ಎಂದು ಶಾಸಕರು ಹೇಳಿದ್ದಾರೆ. ನಮ್ಮ ಶಾಸಕರಿಗೆ ಕನ್ಪೂಜನ್ ಇತ್ತು. ಈಗ ಸಿಎಂ ಡಿಸಿಎಂ ಆದೇಶಕ್ಕೆ ಬದ್ದ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಸಚಿವ ಕೆಎಚ್​ ಮುನಿಯಪ್ಪ ಅಳಿಯನಿಗೆ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಖಚಿತವಾಗುತ್ತಿದ್ದಂತೆಯೇ ರಮೇಶ್ ಕುಮಾರ್ ಬಣದ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಕೆಲ ಶಾಸಕ, ವಿಧಾನಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಹೋಗಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಕೋಲಾರ ನಾಯಕರ ಜೊತೆ ಸಂಧಾನ ಸಭೆ ಮಾಡಿದ್ದು, ಸಭೆ ಫಲಪ್ರದವಾಗಿದೆ. ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ ಉಳಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!