ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿಲ್ಲಿ ಪೊಲೀಸ್ ಎಂದು ಕರೆ ಮಾಡಿದ ಆಗಂತುಕನೋರ್ವ ವ್ಯಕ್ತಿಯೋರ್ವರಿಗೆ ಬರೋಬ್ಬರಿ 16.50 ಲಕ್ಷ ರೂ. ಹಣ ದೋಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಈ ಬಗ್ಗೆ ಬೊಳುವಾರಿನ ಡಾ. ಚಿದಂಬರ ಅಡಿಗ (69) ಎಂಬವರು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ?
ಡಾ.ಚಿದಂಬರ ಅಡಿಗ (69) ಎಂಬವರಿಗೆ ಮಾ.28 ರಂದು ಬೆಳಗ್ಗೆ, ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ, ತಾನು ದಿಲ್ಲಿಯಿಂದ ಪೊಲೀಸ್ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾನೆ.
ನಿಮ್ಮ ಮೇಲೆ ದಿಲ್ಲಿಯಲ್ಲಿ ಮಾದಕ ವಸ್ತುವಿಗೆ ಸಂಬಂಧಿಸಿ, ಅಕ್ರಮ ಹಣ ಹೊಂದಿರುವ ಬಗ್ಗೆ ಹಾಗೂ ಮಾನವ ಕಳ್ಳ ಸಾಗಾಣಿಕ ಪ್ರಕರಣ ದಾಖಲಾಗಿ, ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ. ನೀವು ತಕ್ಷಣ ದಿಲ್ಲಿಯ ಸಿಬಿಐ ನ್ಯಾಯಾಲಯಕ್ಕೆ ಹಾಜರಾಗಬೇಕು. ನಿಮಗೆ ಇಲ್ಲಿಗೆ ಬರಲು ಆಗದಿದ್ದರೆ ಈಗ ಆನ್ಲೈನ್ ಮೂಲಕ ಕೋರ್ಟ್ ಕೇಸ್ ನಡೆಸುತ್ತೇವೆ. ನೀವು ನಿಮ್ಮ ಬ್ಯಾಂಕ್ ಅಕೌಂಟ್‌ನಲ್ಲಿದ್ದ ಹಣವನ್ನು ನಾನು ಹೇಳುವ ಅಕೌಂಟ್ ನಂಬರ್‌ಗೆ ವರ್ಗಾವಣೆ ಮಾಡಬೇಕು.
ನಿಮ್ಮ ಕೋರ್ಟ್ ಕೇಸ್ ಮುಗಿದ ಮೇಲೆ ನಿಮಗೆ ನಿಮ್ಮ ಹಣ ವಾಪಾಸು ಸಿಗುತ್ತದೆ ಇಲ್ಲದಿದ್ದರೆ ನಿಮ್ಮ ಮನೆಗೆ ಬಂದು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾನೆ. ಇದಲ್ಲದೆ ದೆಹಲಿಯಲ್ಲಿ ಪ್ರಕರಣ ದಾಖಲಾಗಿರುವಂತೆ ಬಿಂಬಿಸುವ ಕೆಲವು ದಾಖಲೆಗಳನ್ನು ಕೂಡಾ ಅವರ ಮೊಬೈಲ್‌ಗೆ ಕಳುಹಿಸಿದ್ದಾನೆ. ಅಡಿಗರು ಅಪರಿಚಿತನ ಮಾತು ನಂಬಿ, ಗಾಬರಿಗೊಂಡು, ಬ್ಯಾಂಕ್ ಖಾತೆಯಿಂದ, ಆತ ತಿಳಿಸಿದ ಖಾತೆಗೆ ರೂ.16.50 ಲಕ್ಷ ಹಣ ವರ್ಗಾವಣೆ ಮಾಡಿದ್ದು, ಸ್ವಲ್ಪ ಹೊತ್ತಿನ ಬಳಿಕ ಅದೇ ವ್ಯಕ್ತಿ ಮತ್ತೆ ಕರೆಮಾಡಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.
ಈ ವೇಳೆ ಅಡಿಗರಿಗೆ ಅನುಮಾನ ಬಂದು ಕರೆ ಕಡಿತಗೊಳಿಸಿದ್ದಾರೆ. ಘಟನೆಯ ಬಗ್ಗೆ ತನ್ನ ಗೆಳೆಯರಿಗೆ ತಿಳಿಸಿದಾಗ ಇದು ಆನ್ ಲೈನ್ ವಂಚನೆ ಎಂಬುದು ಗೊತ್ತಾಗಿದೆ. ಆದರೆ ಆ ವೇಳೆಗಾಗಲೇ ವಂಚಕ ಹಣ ಎಗರಿಸಿ ಕಣ್ಮರೆಯಾಗಿದ್ದಾನೆ. ಇದೀಗ ಪೊಲೀಸರು ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ.