ಸುಳ್ಳು ಪ್ರಚಾರ ಫಲ ನೀಡದು ಎಂದು ಕಾಂಗ್ರೆಸ್‌ಗೆ ಈಗ ಜ್ಞಾನೋದಯವಾಗಿದೆ: ಕುಟುಕಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಅತೀ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲುವ ಉತ್ಸಾಹದಲ್ಲಿ ಹಲವು ಸಚಿವರನ್ನು ಅಭ್ಯರ್ಥಿಗಳಾಗಿಸುವ ಘೋಷಣೆ ಮಾಡಿದ್ದರು. ಆದರೆ, ಮೋದಿ ಜನಪ್ರಿಯತೆಗೆ ಅಂಜಿ ಯಾವ ಸಚಿವರೂ ಅಭ್ಯರ್ಥಿ ಆಗಲು ತಯಾರಾಗಿಲ್ಲ. ಪ್ರಧಾನಿ ಮೋದಿ ಜನಪ್ರಿಯತೆ ಉತ್ತುಂಗದಲ್ಲಿದೆ. ಅದನ್ನು ಮತವಾಗಿ ಪರಿವರ್ತಿಸುವ ಸವಾಲನ್ನು ನಮ್ಮ ಕಾರ್ಯಕರ್ತರು ಸ್ವೀಕರಿಸಿ ಯಶಸ್ಸು ಕಾಣಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.

ಅವರು ಭಾನುವಾರ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಬಿಜೆಪಿ ರಾಜ್ಯ ಚುನಾವಣಾ ವಿಭಾಗ ಮತ್ತು ಕಾನೂನು ವಿಭಾಗದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸುಳ್ಳು ಪ್ರಚಾರ ಪ್ರಯೋಜನ ನೀಡದು ಎಂಬುದು ಕಾಂಗ್ರೆಸ್‌ಗೆ ಈಗ ಜ್ಞಾನೋದಯ ಆಗಿದೆ. ಅಧಿಕಾರಕ್ಕೆ ಬಂದ ಒಂಭತ್ತು ತಿಂಗಳಲ್ಲಿ ಕೆಟ್ಟ ಸರಕಾರ ಎಂಬ ಹೆಸರನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪಡೆದುಕೊಂಡಿದೆ. ರಾಜ್ಯದ ಜನರು ಇಂದು ಹತಾಶರಾಗಿದ್ದಾರೆ ಎಂದ ಅವರು, ನಮ್ಮ ಎದುರಾಳಿಗಳನ್ನು ಹದ್ದುಬಸ್ತಿನಲ್ಲಿ ಇಡುವ ಕೆಲಸ ಆಗಲೇಬೇಕು. ಇಲ್ಲವಾದರೆ, ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡುತ್ತದೆ ಎಂದರು.

ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಮಾತನಾಡಿ, ಪ್ರಧಾನಿಯವರ ವಿರುದ್ಧ ಮಾತನಾಡಿದ ಶಿವರಾಜ ತಂಗಡಗಿ ವಿರುದ್ಧ ಕಾರಟಗಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಂದ್ರ ಗೃಹ ಸಚಿವರ ವಿರುದ್ಧ ಆಕ್ಷೇಪಾರ್ಹ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ದೂರು ಕೊಡಲಾಗಿದೆ. ಇದಲ್ಲದೆ ಕಳೆದ 12 ದಿನಗಳಲ್ಲಿ ಸುಮಾರು 25 ದೂರುಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!