ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷದ ಮೊದಲ ಸುಂಟರಗಾಳಿ ಪಶ್ಚಿಮ ಬಂಗಾಳ ಜಲ್‌ಪೈಗುರಿ ಜಿಲ್ಲೆಗೆ ಅಪ್ಪಳಿಸಿದೆ. ಭಾರೀ ಮಳೆಗೆ ವಾಹನಗಳು ಜಖಂ ಗೊಂಡಿದೆ.
ಮರಳಗಳು, ಮನೆ, ಗೋಡೆಗಳು ನೆಲಸಮಗೊಂಡಿದೆ. ಈ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಜಲ್‌ಪೈಗುರಿ ಹಾಗೂ ಮೈನಗುರಿ ವಲಯದಲ್ಲಿ ಸುಂಟರಗಾಳಿ ರಭಸಕ್ಕೆ ವಾಹನಗಳು ಪಲ್ಟಿಯಾಗಿದೆ. ಗಾಯಗೊಂಡವರನ್ನು ಜಲ್‌ಪೈಗುರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಾಗಿದೆ.
ಮೃತಪಟ್ಟ ನಾಲ್ವರ ಪೈಕಿ ಇಬ್ಬರಾದ 49 ವರ್ಷದ ಅನಿಮಾ ರಾಯ್, 52 ವರ್ಷದ ದಿಜೇಂದ್ರ ನಾರಾಯಣ ಸರ್ಕಾರ್ ಎಂದು ಗುರುತಿಸಲಾಗಿದೆ.
ಜಲ್‌ಪೈಗುರಿಯಲ್ಲಿರುವ ಹಲವು ಗೋಶಾಲೆಗಳ ಮೇಲ್ಜಾವಣಿ ಹಾರಿ ಹೋಗಿದೆ. ಗೋಡೆಗಳು ಮಗುಚಿ ಬಿದ್ದಿದೆ. ಜಾನುವಾರುಗಳು ಕೂಡ ಸಂಕಷ್ಟಕ್ಕೆ ಸಿಲುಕಿದೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಸರ್ಕಾರದಿಂದ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇತ್ತ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಸ್ಥಳೀಯ ಜಲ್ಲಾಡಳಿತಕ್ಕೆ ಮಮತಾ ಬ್ಯಾನರ್ಜಿ ಸೂಚನೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜಿ, ಇಂದು ಮಧ್ಯಾಹ್ನ ಬೀಸಿದ ಸುಂಟರಗಾಳಿ ಹಾಗೂ ಭಾರಿ ಮಳೆಗೆ ಭಾರಿ ಅನಾಹುತ ಸಂಭವಿಸಿದೆ. ಈ ಘಟನೆ ನೋವು ತರಿಸಿದೆ. ಘಟನೆಯಲ್ಲಿ ಕೆಲವರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರ ಸೂಕ್ತ ಚಿಕಿತ್ಸೆಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಹಲವರು ಮನೆ ಕಳೆದುಕೊಂಡಿದ್ದಾರೆ. ಸಂಕಷ್ಟಕ್ಕಿ ಸಿಲುಕಿರುವ ಜನರಿಗೆ ಸರ್ಕಾರ ನೆರವು ನೀಡಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಜಿಲ್ಲಾಡಳಿತ ಪರಿಹಾರ ನೀಡಲಿದೆ ಎಂದು ಹೇಳಿದ್ದಾರೆ.