Saturday, January 10, 2026

ಹಣಕ್ಕಾಗಿ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ ಪಾಪಿ ತಂದೆ,ಅಜ್ಜಿ: 12 ಮಂದಿಯ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಪಾಪಿ ತಂದೆ ಹೆತ್ತ ಮಗಳನ್ನೇ ಹಣದಾಸೆಗಾಗಿ ವೇಶ್ಯಾವಾಟಿಕೆಗೆ ದೂಡಿದ ಅಮಾನವೀಯ ಘಟನೆ ನಡೆದಿದೆ. ಅದರಲ್ಲೂ ಆಕೆ ಅಪ್ರಾಪ್ತ ವಯಸ್ಸಿನವಳಾಗಿದ್ದು, ಆಕೆಯ ಅಜ್ಜಿ ಕೂಡ ಈ ಕೃತ್ಯಕ್ಕೆ ಸಹಕರಿಸಿದ್ದಾಳೆ. ಇವರಿಬ್ಬರೂ ಹಾಗೂ ಇವರಿಂದ ಬಾಲಕಿಯನ್ನು ಪಡೆದುಕೊಂಡ ಮಾಂಸ ದಂಧೆ ಕಿಂಗ್‌ಪಿನ್‌ ಸೇರಿದಂತೆ 12 ಮಂದಿಯನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

ದಿನಕ್ಕೆ 5 ಸಾವಿರ ರೂಪಾಯಿ ಸಿಗುತ್ತದೆಯೆಂಬ ದುರಾಸೆಯಿಂದ ಹೆತ್ತ ಮಗಳನ್ನೇ ದಂಧೆಗೆ ಒಪ್ಪಿಸಿದ್ದಾನೆ. ತಾಯಿಯನ್ನು ಕಳೆದುಕೊಂಡು ಸಂಬಂಧಿಕರ ಮನೆಯಲ್ಲಿದ್ದ ಅಪ್ರಾಪ್ತೆ, ಪಿಯುಸಿವರೆಗೂ ವಿದ್ಯಾಭ್ಯಾಸ ಮುಗಿಸಿದ ನಂತರ ತಂದೆ ಮನೆಗೆ ಮರಳಿದ್ದಳು. ಈ ವೇಳೆ ಡಿಸೆಂಬರ್​ನಲ್ಲಿ ತಂದೆಯೊಂದಿಗೆ ಅಜ್ಜಿಯ ಮನೆಗೆ ಹೋಗಿ 2 ದಿನ ಉಳಿದು ಬಂದಿದ್ದಳು. ಮತ್ತೊಮ್ಮೆ ಅಜ್ಜಿಯಿಂದ ಬುಲಾವು ಬಂದಿದೆಯೆಂದು ಆಕೆಯ ಮನೆಗೆ ಹೋದ ಹುಡುಗಿಗೆ ಕಂಟಕ ಕಾದಿತ್ತು. ಅದೇ ಸಂದರ್ಭದಲ್ಲಿ ಅಜ್ಜಿಯ ಮನೆಗೆ ಆಗಮಿಸಿದ್ದ ಭರತ್ ಶೆಟ್ಟಿ ಎಂಬಾತ ತಂದೆ- ಮಗಳೊಡನೆ ಸಲುಗೆ ಬೆಳೆಸಿದ್ದ. ಆತನ ಮನೆಗೆ ಬಂದು ತಂಗುವಂತೆಯೂ ತಿಳಿಸಿದ್ದ. ಇದಕ್ಕೊಪ್ಪಿದ್ದ ತಂದೆ ಮಗಳಿಬ್ಬರೂ ಭರತ್​ನೊಂದಿಗೆ ಮಂಗಳೂರಿಗೆ ತೆರಳಿದ್ದರು.

ಮಾರ್ಗ ಮಧ್ಯದಲ್ಲಿ ತಾನು ಮುಟ್ಟಾಗಿರುವುದಾಗಿ ತಂದೆಗೆ ತಿಳಿಸಿದ್ದಳು. ಆದಾಗಿಯೂ ಮರುದಿನ ಅಪ್ರಾಪ್ತೆ ಬಳಿ ಬಂದ ಭರತ್, 4-5 ಜನ ಬರುತ್ತಾರೆ, ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಅವನ ಮಾತಿನಂತೆ 20ರಿಂದ ಹಿಡಿದು 45 ವರ್ಷ ವಯೋಮಿತಿಯ ನಾಲ್ವರು ಒಬ್ಬರಾದ ಮೇಲೊಬ್ಬರಂತೆ ಆಕೆಯನ್ನು ಲೈಂಗಿಕವಾಗಿ ಶೋಷಿಸಿದ್ದರು.

ಅಪ್ರಾಪ್ತ ಬಾಲಕಿ ನೀಡಿದ ದೂರಿನ ಮೇರೆಗೆ FIR ದಾಖಲಾಗಿದ್ದು, ಬಾಲಕಿಯ ತಂದೆ, ಅಜ್ಜಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಾಂಸ ದಂಧೆಯ ಕಿಂಗ್‌ಪಿನ್ ಎನ್ನಲಾಗಿರುವ ಭರತ್ ಶೆಟ್ಟಿ ಸೇರಿದಂತೆ ಒಟ್ಟು 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಭರತ್ ಶೆಟ್ಟಿಯ ವಿರುದ್ಧ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ವೇಶ್ಯಾವಾಟಿಕೆ ಸಂಬಂಧ 8ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

error: Content is protected !!