ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ ಘಟಕದ ಮೇಲೆ ಅಬಕಾರಿ ಜಂಟಿ ಆಯುಕ್ತರು ದಾಳಿ ನಡೆಸಿದ್ದಾರೆ.
ಬಿಯರ್ ತಯಾರಕ ಘಟಕದಿಂದ ಒಟ್ಟಾರೆ 98.52 ಕೋಟಿ ರೂಪಾಯಿ ಮೌಲ್ಯದ ಬಿಯರ್ ದಾಸ್ತಾನು ಜಪ್ತಿ ಮಾಡಿದ್ದಾರೆ.
ಸರ್ಕಾರಕ್ಕೆ ತೋರಿಸಿರುವ ಲೆಕ್ಕಕ್ಕಿಂತ ಅಧಿಕ ದಾಸ್ತಾನು ಸಂಗ್ರಹವಾಗಿದ್ದು, ಒಟ್ಟಾರೆ ಏಳು ಸಾವಿರ ಬಾಕ್ಸ್‌ಗಳಲ್ಲಿ ಬಿಯರ್ ಬಾಟಲಿಗಳನ್ನು ಸಂಗ್ರಹಿಸಿ ಇಡಲಾಗಿದೆ. ಈ ಬಗ್ಗೆ ಒಟ್ಟಾರೆ 17 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಬಂದ ಅನಾಮಧೇಯ ಕರೆಯ ಮೇರೆಗೆ ಚುನಾವಣಾಧಿಕಾರಿಗಳು ಹಾಗೂ ಅಬಕಾರಿ ಜಂಟಿ ಆಯುಕ್ತರು ಘಟಕಕ್ಕೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದಾಗ ಲೆಕ್ಕಪುಸ್ತಕದ ದಾಸ್ತಾನಿಗಿಂತ ಹೆಚ್ಚಿನ ಬಿಯರ್ ದಾಸ್ತಾನು ಕಂಡುಬಂದಿದೆ. ಈ ಹಿನ್ನೆಲೆ ಅವುಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ