ಯೋಗ ಗುರುವಿಗೆ ಕೇರಳದಲ್ಲಿಯೂ ಸಂಕಷ್ಟ: ದಿವ್ಯಾ ಫಾರ್ಮಸಿ ವಿರುದ್ಧ ಕೊಝಿಕ್ಕೋಡ್‌ನಲ್ಲೂ ದೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳ ಹಾಗೂ ಇಂಗ್ಲಿಷ್ ಪತ್ರಿಕೆಗಳಲ್ಲಿ ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕಟಿಸಿದ್ದಕ್ಕಾಗಿ ಯೋಗ ಗುರು ರಾಮ್‌ದೇವ್ ಮತ್ತು ಅವರ ಕಂಪನಿ ದಿವ್ಯಾ ಫಾರ್ಮಸಿ ವಿರುದ್ಧ ಕೇರಳ ಔಷಧಿ ನಿಯಂತ್ರಣ ಇಲಾಖೆ ಕೊಝಿಕ್ಕೋಡ್‌ನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ.

ಈ ಪ್ರಕರಣದಲ್ಲಿ ರಾಮದೇವ್ ಜೊತೆ ಪತಂಜಲಿ ಆಯುರ್ವೇದ್‌ನ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ಲೈಂಗಿಕ ದೌರ್ಬಲ್ಯ ಮತ್ತು ಮಧುಮೇಹವನ್ನು ಗುಣಪಡಿಸುತ್ತವೆ ಎಂದು ಹೇಳಿಕೊಂಡು ದಿವ್ಯ ಫಾರ್ಮಸಿಯು ಔಷಧೀಯ ಉತ್ನನ್ನಗಳ ಪ್ರಚಾರ ಮಾಡಿದೆ. ಇವು ’ಔಷಧಿ ಮತ್ತು ಮಾಂತ್ರಿಕ ಪರಿಹಾರಗಳ ಆಕ್ಷೇಪಾರ್ಹ ಜಾಹೀರಾತುಗಳ ಕಾಯ್ದೆಯಡಿ ಚಿಕಿತ್ಸೆಗಳ ಪ್ರಚಾರವನ್ನು ನಿಷೇಧಿಸಲಾಗಿರುವ 54 ಕಾಯಿಲೆಗಳಲ್ಲಿ ಸೇರಿವೆ ಎಂದು ದೂರಿನಲ್ಲಿ ಹೇಳಲಾಗಿದೆ.

ಫೆಬ್ರವರಿ 2022ರಲ್ಲಿ ಕಣ್ಣೂರಿನ ನೇತ್ರತಜ್ಞ ಕೆ.ವಿ.ಬಾಬು ಎಂಬವರು ದಿವ್ಯ ಫಾರ್ಮಸಿ ವಿರುದ್ಧ ದೂರು ಸಲ್ಲಿಸಿದ್ದರು. ಈ ಬಗ್ಗೆ ಕೇರಳ ಔಷಧಿ ನಿಯಂತ್ರಣ ಇಲಾಖೆ ತನಿಖೆಗೆ ಕೈಗೆತ್ತಿಕೊಂಡಿದ್ದು, ಈ ವೇಳೆ ಫಾರ್ಮಸಿಯು ಕಾಯ್ದೆಯನ್ನು ಉಲ್ಲಂಘಿಸಿದ್ದ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಏ.2022 ಮತ್ತು ಅ.2023ರ ನಡುವೆ ಮಲಯಾಳಂ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಕೊಝಿಕ್ಕೋಡ್‌ನಲ್ಲಿ ಏಳು, ಎರ್ನಾಕುಲಮ್‌ನಲ್ಲಿ ಆರು, ತ್ರಿಶೂರು ಮತ್ತು ಕೊಲ್ಲಮ್‌ನಲ್ಲಿ ತಲಾ ಐದು, ತಿರುವನಂತಪುರದಲ್ಲಿ ನಾಲ್ಕು ಮತ್ತು ಕಣ್ಣೂರಿನಲ್ಲಿ ಎರಡು ಉಲ್ಲಂಘನೆಗಳು ಈ ವೇಳೆ ಪತ್ತೆಯಾಗಿದ್ದವು.

ಈ ನಡುವೆ ಭಾರತೀಯ ವೈದ್ಯಕೀಯ ಸಂಘ ಕೂಡಾ ಸರ್ವೋಚ್ಚ ನ್ಯಾಯಾಲಯದಲ್ಲಿ ಪತಂಜಲಿ ಆಯುರ್ವೇದ್‌ನ ವಿರುದ್ಧ ಪ್ರಕರಣವನ್ನು ದಾಖಲಿಸಿತ್ತು. ಈ ಕೇಸ್‌ಗೆ ಸಂಬಂಧಿಸಿ ಆರಂಭಿಸಲಾಗಿರುವ ನ್ಯಾಯಾಂಗ ನಿಂದನೆ ಕ್ರಮದಲ್ಲಿ ಅನುಸರಣಾ ಅಫಿಡವಿಟ್ ಸಲ್ಲಿಸಲು ಕೊನೆಯ ಅವಕಾಶವನ್ನು ನೀಡಿದ ಒಂದು ದಿನ ಮೊದಲು, ಈಗ ಕೇರಳ ಔಷಧಿ ನಿಯಂತ್ರಣ ಇಲಾಖೆ ದೂರು ದಾಖಲಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!