ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕರಾವಳಿಯಲ್ಲಿ ಬಿಸಿಲಿನ ತಾಪ ಎಲ್ಲರನ್ನೂ ಹೈರಾಣಾಗಿಸುತ್ತಿದ್ದು, ಬಿಸಿ ಅಲೆಯ ಹೊಡೆತ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈಗಾಗಲೇ ಆರೋಗ್ಯ ಇಲಾಖೆ ಬಿಸಿಲಿನಿಂದ ಆರೋಗ್ಯ ರಕ್ಷಿಸಿಕೊಳ್ಳಲು ಸಲಹೆ ನೀಡಿದೆ. ಇದರ ಜೊತೆಗೇ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕೂಡಾ ಹಲವು ಸಲಹೆಗಳನ್ನು ನೀಡಿದೆ.
ಸಾರ್ವಜನಿಕರೇ ಬೆಳಗ್ಗೆ 11 ರಿಂದ ಮಧ್ಯಾಹ್ನ3 ಗಂಟೆಯ ತನಕ ಬಿಸಿಲಿಗೆ ಹೋಗಲೆ ಬೇಡಿ. ಹೋಗಲೇ ಬೇಕಾದ ಅನಿವಾರ್ಯತೆ ಇದ್ದರೆ ಕೊಡೆ ಬಳಸಿ. ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಉಳಿಯಲು ಪ್ರಯತ್ನಿಸಿ. ತೆಳುವಾದ ಸಡಿಲವಾದ ಹತ್ತಿಯ ಉಡುಪುಗಳನ್ನು ಧರಿಸಿಕೊಳ್ಳಿ. ಆದಷ್ಟು ಬಿಳಿ ಬಣ್ಣದ ಬಟ್ಟೆಗಳ ಬಳಕೆ ಒಳ್ಳೆಯದು. ಹತ್ತಿಯ ಅಥವಾ ಟರ್ಬನ್ ಟೋಪಿ ಹಾಗೂ ಕೂಲಿಂಗ್ ಗ್ಲಾಸ್ ಉತ್ತಮ. ಹಿರಿಯ ನಾಗರಿಕರು, ಮಕ್ಕಳು ದಿನದ ವೇಳೆ ಆದಷ್ಟು ಹೆಚ್ಚು ನೀರು ಸೇವಿಸಬೇಕು.
ಬೆಳಿಗ್ಗೆ 12 ರಿಂದ ಸಂಜೆ 3 ಗಂಟೆಯ ವರೆಗೆ ಹೊರಾಂಗಣ ದೈಹಿಕ ಚಟುವಟಿಕೆ ಬೇಡ. ನೀರು ಕುಡಿಯುವ ಜೊತೆಗೆ ಮಜ್ಜಿಗೆ, ಗ್ಲೋಕೋಸ್, ಓಆರ್‌ಎಸ್ ಹೆಚ್ಚು ಉಪಯೋಗಿಸಿ ಕೊಠಡಿಯ ತಾಪಮಾನವನ್ನು ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಹೀಟ್ ಸ್ಟೋಕ್ ಲಕ್ಷಣ ಕಂಡರೆ ಏನು ಮಾಡಬೇಕು?
ಹೀಟ್ ಸ್ಟೋಕ್ ಲಕ್ಷಣ ಹೊಂದಿರುವ ವ್ಯಕ್ತಿಯನ್ನು ತಕ್ಷಣ ತಂಪಾದ ಜಾಗಕ್ಕೆ ಸ್ಥಳಾಂತರಿಸಬೇಕು. ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯು ಕನಿಷ್ಟ ಬಟ್ಟೆಯನ್ನು ಹೊಂದಿರುವಂತೆ ನೋಡಿಕೊಂಡು, ವ್ಯಕ್ತಿಗೆ ತಣ್ಣೀರಿನಿಂದ ಸ್ಪಾಂಜ್ ಮಾಡಬೇಕು ಅಥವಾ ಐಸ್ ಪ್ಯಾಕ್‌ಗಳನ್ನು ಉಪಯೋಗಿಸಬಹುದು, ವ್ಯಕ್ತಿಯನ್ನು ಐಸ್‌ಬ್ಲಾಕ್‌ಗಳ ಮಧ್ಯೆ ಇಡಬಹುದು. ಹೀಟ್ ವೇವ್ ಸ್ಟೋಕ್‌ಗೆ ಒಳಗಾದ ವ್ಯಕ್ತಿಯಲ್ಲಿ ಯಾವುದೇ ಸುಧಾರಣೆ ಕಂಡುಬಾರದಿದ್ದಾಗ ಕೂಲಿಂಗ್ ವ್ಯವಸ್ಥೆಯೊಂದಿಗೆ ಅವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಬೇಕು.
ನಿಲ್ಲಿಸಿದ ವಾಹನದಲ್ಲಿ ಮಕ್ಕಳು, ಪ್ರಾಣಿಗಳನ್ನು ಬಿಡಬೇಡಿ
ಬಿಸಿಲಿಗೆ ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು. ಸಾಕುಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ, ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸಬೇಕು. ಪ್ರಯಾಣದ ಸಂದರ್ಭದಲ್ಲಿ ನೀರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು.
ಆರೋಗ್ಯ ಕಾಪಾಡಿಕೊಳ್ಳುಲು ಸಲಹೆಗಳು :
ಅತೀ ಹೆಚ್ಚು ತಾಪಮಾನಕ್ಕೆ ಒಳಗಾದ ವ್ಯಕ್ತಿಯನ್ನು ನೆರಳಿನ ಅಡಿಯಲ್ಲಿ ತಂಪಾದ ಸ್ಥಳಕ್ಕೆ ಸ್ಥಳಾಂತರಿಸಿ
ಒದ್ದೆಯಾದ ಬಟ್ಟೆಯಿಂದ ಮೈ ಒರೆಸುವುದು, ತಂಪಾದ ಒದ್ದೆ ಬಟ್ಟೆಯನ್ನು ಹಾಕುವುದು ಮಾಡಿ
ದೇಹದಲ್ಲಿ ಏರಿದ ಉಷ್ಣತೆಯನ್ನು ತಗ್ಗಿಸಲು ತಲೆಯ ಮೇಲೆ ತಣ್ಣೀರನ್ನು ನೀರನ್ನು ನಿಧಾನವಾಗಿ ಹಾಕಿ
ಕಪ್ಪು, ನೀಲಿ ಬಣ್ಣದ ಬಟ್ಟೆ ಹೆಚ್ಚಾಗಿ ಧರಿಸಬೇಡಿ, ಹೆಚ್ಚು ಕಾಟನ್ ಬಟ್ಟೆಗಳನ್ನೇ ನಿತ್ಯವೂ ಧರಿಸಿಕೊಳ್ಳಿ
ಬಿಸಿಲಿನಿಂದ ವಿಟಮಿನ್ ಸಿ ಕೊರತೆ ಎದುರಾಗುವುದು ತಪ್ಪಿಸಲು ನಿಂಬೆ ಹಣ್ಣಿನ ಜ್ಯೂಸ್ ಹೆಚ್ಚು ಕುಡಿಯಿರಿ.
ಹೀಗೂ ಮಾಡಬಹುದು…
ಬೆಳಗ್ಗೆ ಎದ್ದ ತಕ್ಷಣ ತುಳಸಿ ಎಲೆಗಳನ್ನು ರುಬ್ಬಿಕೊಂಡು ಎರಡು ಲೋಟದಷ್ಟು ನೀರನ್ನು ಬೆರೆಸಿ ಕುಡಿಯುವುದರಿಂದ ಆಯಾಸ ಆಗುವುದಿಲ್ಲ.
ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ಹೆಚ್ಚು ಬಳಸಬಾರದು.
ತಲೆ ಮತ್ತು ಮೆದುಳು ತಂಪಾಗಿರಲು ಎರಡು ದಿನಗಳಿಗೊಮ್ಮೆ ಕೊಬ್ಬರಿ ಎಣ್ಣೆ ಬದಲು ರಾತ್ರಿ ಮಲಗುವಾಗ ಹರಳೆಣ್ಣೆ ಹಚ್ಚಬೇಕು.
ರಾತ್ರಿ ಮಲಗುವಾಗ ಮೊದಲು ತಣ್ಣೀರಿನ ಬಟ್ಟೆಯಿಂದ ನೆಲವನ್ನು ಒರೆಸಿಕೊಂಡು ತೆಳುವಾದ ಬಟ್ಟೆಯ ಮೇಲೆ ಮಲಗುವುದು ಸೂಕ್ತ.
ಹೆಸರು ಕಾಳುಗಳನ್ನು ನೀರಿನಲ್ಲಿ ಅರ್ಧ ಗಂಟೆಯಷ್ಟು ನೆನಸಿಟ್ಟು ನಂತರ ರುಬ್ಬಿ ಜ್ಯೂಸ್ ಮಾಡಿಕೊಂಡು ದಿನಕ್ಕೆರಡು ಬಾರಿ ಕುಡಿಯುವುದರಿಂದ ದೇಹ ತಂಪಾಗಿರುತ್ತದೆ.
5 ವರ್ಷದ ಒಳಗಿನ ಮಕ್ಕಳಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಒಂದು ಚಿಟಿಕೆಯಷ್ಟು ಅಯೋಡಿಯನ್ ಉಪ್ಪು ಬೆರೆಸಿದ ನೀರನ್ನು ಕುಡಿಸುತ್ತಿರಬೇಕು. ಬೇಸಿಗೆ ದಿನಗಳಲ್ಲಿ ತಣ್ಣೀರಿನ ಸ್ನಾನ ದೇಹಕ್ಕೆ ಒಳ್ಳೆಯದು.