Sunday, January 11, 2026

ಫ್ರೀ ರೈಡ್ ಜೊತೆಗೆ ಚಾಲಕನಿಂದಲೇ ಹಣ ವಸೂಲಿ! ಮಹಿಳೆಯ ‘ಬ್ಲ್ಯಾಕ್‌ಮೇಲ್’ ತಂತ್ರಕ್ಕೆ ಪೊಲೀಸರೇ ಶಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಡಿಗೆ ಹಣ ಕೇಳಿದ ಕ್ಯಾಬ್ ಚಾಲಕನಿಗೆ ಲೈಂಗಿಕ ದೌರ್ಜನ್ಯದ ಸುಳ್ಳು ಕೇಸ್ ಹಾಕುವುದಾಗಿ ಬೆದರಿಸಿ ಹಣ ವಸೂಲಿಗೆ ಯತ್ನಿಸಿದ ಮಹಿಳೆಯೊಬ್ಬಳ ಅಸಲಿ ಮುಖವಾಡ ಈಗ ಕಳಚಿದೆ. ಗುರುಗ್ರಾಮದ ಸೆಕ್ಟರ್ 29ರಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮಹಿಳೆ ಜ್ಯೋತಿ ದಲಾಲ್ ಎಂಬಾಕೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಜಿಯಾವುದ್ದೀನ್ ಎಂಬುವವರ ಕ್ಯಾಬ್ ಹತ್ತಿದ ಜ್ಯೋತಿ ದಲಾಲ್, ದಿನವಿಡೀ ನೂರಾರು ಕಿಲೋಮೀಟರ್ ವಿವಿಧ ಕಡೆ ಸುತ್ತಾಡಿದ್ದಾಳೆ. ಅಷ್ಟೇ ಅಲ್ಲದೆ, ಚಾಲಕನ ಬಳಿಯೇ ಅನಿವಾರ್ಯತೆ ಇದೆ ಎಂದು ಹೇಳಿ 700 ರೂ. ಹಣವನ್ನೂ ಪಡೆದಿದ್ದಾಳೆ. ಮಧ್ಯಾಹ್ನದ ವೇಳೆಗೆ ಪ್ರಯಾಣ ಮುಗಿದ ನಂತರ ಚಾಲಕ ಬಾಡಿಗೆ ಹಣ ಪಾವತಿಸುವಂತೆ ಕೇಳಿದಾಗ ಮಹಿಳೆ ಅಸಲಿ ರೂಪ ತೋರಿಸಿದ್ದಾಳೆ. “ಹಣ ಕೇಳಿದರೆ ನಿನ್ನ ಮೇಲೆ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿ ಜೈಲಿಗೆ ಕಳುಹಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾಳೆ.

ಮಹಿಳೆಯ ಬೆದರಿಕೆಗೆ ಮಣಿಯದ ಚಾಲಕ ಜಿಯಾವುದ್ದೀನ್, ಕೂಡಲೇ ಸೆಕ್ಟರ್ 29ರ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಅಲ್ಲಿಯೂ ಸಹ ಮಹಿಳೆಯು ರಂಪಾಟ ಮಾಡಿದ್ದು, ಪೊಲೀಸರ ಎದುರೇ ಚಾಲಕನ ವಿರುದ್ಧ ಆರೋಪ ಮಾಡಿದ್ದಾಳೆ. ನಂತರ ಅಲ್ಲಿಂದ ಜಾಗ ಖಾಲಿ ಮಾಡಿದ್ದಾಳೆ. ಮಹಿಳೆ ಹೋದ ನಂತರ ಚಾಲಕ ನಡೆದ ಘಟನೆಯನ್ನು ಎಳೆ ಎಳೆಯಾಗಿ ವಿವರಿಸಿದ್ದಾನೆ.

ಪೊಲೀಸ್ ತನಿಖೆಯ ವೇಳೆ ಜ್ಯೋತಿ ದಲಾಲ್ ಈ ಹಿಂದೆಯೂ ಇಂತಹ ಹಲವು ವಂಚನೆಗಳನ್ನು ಮಾಡಿರುವುದು ಬೆಳಕಿಗೆ ಬಂದಿದೆ. ಈಕೆ ಈ ಹಿಂದೆ ಮತ್ತೊಬ್ಬ ಕ್ಯಾಬ್ ಚಾಲಕನಿಗೆ 2,000 ರೂ. ಹಾಗೂ ಬ್ಯೂಟಿ ಪಾರ್ಲರ್ ಒಂದರಲ್ಲಿ 20,000 ರೂ. ಬಾಕಿ ಉಳಿಸಿಕೊಂಡು ವಂಚಿಸಿರುವುದು ತಿಳಿದುಬಂದಿದೆ. ಈಕೆಯ ವಿರುದ್ಧ ಸುಲಿಗೆ ಮತ್ತು ಬೆದರಿಕೆ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!