ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಅಕ್ರಮವಾಗಿ ಹಣ, ಸಿಗರೇಟ್, ಸೀರೆ ಸಾಗಾಟ ಲೆಕ್ಕವಿಲ್ಲದಷ್ಟು ನಡೆಯುತ್ತಿದೆ. ಜಿಲ್ಲಾ ಪೊಲೀಸ್ ಬಿಗಿ ಬಂದೋಬಸ್ತ್ ನಿಂದಾಗಿ ಚಿಂಚೋಳಿ ತಾಲೂಕಿನ ಮಿರಿಯಾಣ ಚೆಕ್ ಪೋಸ್ಟ್ ಬಳಿ 1.35 ಲಕ್ಷದ ಮೊತ್ತದ ತಂಬಾಕು, ಸಿಗರೇಟ್ ಹಾಗೂ ಮೇದಕ್ ಚೆಕ್ಪೋಸ್ಟ್ ಬಳಿ ದಾಖಲೆ ಇಲ್ಲದ 30 ಲಕ್ಷ ರೂ., 2.50 ಲಕ್ಷ ರೂ. ಮೌಲ್ಯದ ಬಟ್ಟೆಗಳನ್ನು ಜಪ್ತಿ ಮಾಡಲಾಗಿದೆ.
ತಾಂಡೂರಿನಿಂದ ಚಿಂಚೋಳಿ ಸಾಗಿಸುತ್ತಿದ್ದ 1.35 ಲಕ್ಷ ರೂ. ಮೌಲ್ಯದ ತಂಬಾಕು ಮತ್ತು ಸಿಗರೇಟ್ ವಶಪಡಿಸಿಕೊಳ್ಳಲಾಗಿದೆ. ಏಳು ಲಕ್ಷ ರೂ. ಮೌಲ್ಯದ ಕಾರು, ಇತರೆ ಕಂಪನಿಗಳ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ-ತೆಲಂಗಾಣ ಗಡಿ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯ ಮೇದಕ್ ಚೆಕ್ ಪೋಸ್ಟ್ ನಲ್ಲಿ ದಾಖಲೆಗಳಿಲ್ಲದೆ 30 ಲಕ್ಷ ರೂ. ನಗದು ಹಾಗೂ 2.50 ಲಕ್ಷ ಮೌಲ್ಯದ ಬಟ್ಟೆಗಳನ್ನು ಜಪ್ತಿ ಮಾಡಲಾಗಿದೆ.