ಹೊಸದಿಗಂತ ವರದಿ,ಕಾರವಾರ:
ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಬೇಕು ಎಂದು ಮೋದಿ ಅಪ್ಪಟ ಅಭಿಮಾನಿಯೋರ್ವ ತನ್ನ ಕೈ ಬೆರಳು ಕತ್ತರಿಸಿ ಕಾಳಿ ಮಾತೆಗೆ ಅರ್ಪಿಸಿದ ಘಟನೆ ನಗರದ ಹಬ್ಬುವಾಡದ ಸೋನಾರವಾಡದಲ್ಲಿ ನಡೆದಿದೆ.
ಸೋನಾರವಾಡದ ಅರುಣ್ ವೆರ್ಣೇಕರ ಎನ್ನುವವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅಪಾರವಾದ ಅಭಿಮಾನ ಹೊಂದಿದ್ದು ಮೋದಿಯವರಿಗಾಗಿ ಮನೆಯಲ್ಲಿ ಗುಡಿಯೊಂದನ್ನು ನಿರ್ಮಿಸಿ ಪ್ರತಿ ದಿನ ಪೂಜಿಸಿ ಆರಾಧಿಸುತ್ತಾರೆ .
ಈ ಹಿಂದೆ ಸಹ ಎರಡು ಬಾರಿ ಮೋದಿಯವರು ಪ್ರಧಾನಿಯಾಗಬೇಕು ಎಂದು ಕೈ ಬೆರಳು ಕೊಯ್ದು ರಕ್ತಾಭಿಷೇಕ ಮಾಡಿರುವ ಇವರು ಈ ಬಾರಿ ಎಡಗೈ ತೋರು ಬೆರಳನ್ನೇ ಕತ್ತರಿಸಿಕೊಂಡಿದ್ದಾರೆ.
ಬೆರಳು ಕತ್ತರಿಸಿಕೊಂಡಿರುವ ಇವರು ಗೋಡೆಯ ಮೇಲೆ ಮೋದಿಯವರಿಗೆ ರಕ್ಷಣೆ ನೀಡುವಂತೆ ರಕ್ತದಲ್ಲೇ ಬರೆದುಕೊಂಡಿರುವುದಾಗಿ ತಿಳಿದು ಬಂದಿದೆ.
ಮುಂಬೈನಲ್ಲಿ ಕೆಲಸದಲ್ಲಿದ್ದ ಅರುಣ್ ವೆರ್ಣೇಕರ ಅವರು ಇತ್ತೀಚೆಗೆ ಊರಿಗೆ ಮರಳಿ ಇಲ್ಲಿಯೇ ವಾಸವಾಗಿದ್ದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಆಶಯ ಹೊಂದಿದ್ದು ಅದೇ ಕಾರಣದಿಂದ ಕಾಳಿ ಮಾತೆಗೆ ಕೈ ಬೆರಳು ಕತ್ತರಿಸಿ ಹರಕೆ ನೀಡಿರುವುದಾಗಿ ಹೇಳುತ್ತಾರೆ.