ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಪ್ರಣಾಳಿಕೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಬಗ್ಗೆ ಉಲ್ಲೇಖಿಸಲು ಕಾಂಗ್ರೆಸ್ ಗೆ ಭಯ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಿಡಿಕಾರಿದ್ದಾರೆ.
ಕೇರಳದ ಕೊಲ್ಲಂನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಣರಾಯಿ ವಿಜಯನ್, ‘2024ರ ಲೋಕಸಭಾ ಪ್ರಣಾಳಿಕೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ವಿವಾದಾತ್ಮಕ ವಿಷಯಗಳ ಬಗ್ಗೆ ಪ್ರಸ್ತಾಪಿಸಲು ಕಾಂಗ್ರೆಸ್ಗೆ ಇರುವ ಭಯವನ್ನು ಇದು ತೋರಿಸುತ್ತದೆ.
ಅಧಿಕಾರಕ್ಕೆ ಬಂದರೆ ಜಿಎಸ್ಟಿ ಸೇರಿ, ಸಂವಿಧಾನವನ್ನು ಉಲ್ಲಂಘಿಸಿ ಜಾರಿಗೆ ತರಲಾದ ಹಲವು ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಆದರೆ ಸಿಎಎ ಬಗ್ಗೆ ಒಂದು ಶಬ್ದವನ್ನೂ ಉಲ್ಲೇಖಿಸಿಲ್ಲ ಎಂದು ಕಿಡಿಕಾರಿದರು.
ಉದ್ದೇಶಪೂರ್ವಕವಾಗಿಯೇ ಸಿಎಎ ಅನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸದೇ ಹೊರಗಿಡಲಾಗಿದೆ. ಹಲವು ಕಾನೂನುಗಳನ್ನು ಉಲ್ಲೇಖಿಸಿ ಅವುಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಿರುವ ಕಾಂಗ್ರೆಸ್, ಸಿಎಎ ಬಗ್ಗೆ ಮಾತನಾಡಲು ಭಯಪಡುತ್ತಿದೆ ಎಂದು ಟೀಕಿಸಿದ್ದಾರೆ. .