ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಕ್ಷದಲ್ಲಿ ಸುಧಾರಣೆಯ ತರುವ ಉದ್ದೇಶದಿಂದ, ನೊಂದ ಕಾರ್ಯಕರ್ತರ ಹಾಗೂ ಹಿಂದುತ್ವದ ಧ್ವನಿಗಾಗಿ ಈ ಬಾರಿ ಒಬ್ಬಂಟಿಯಾಗಿ ಚುನಾವಣೆಗೆ ನಿಲ್ಲುವ ತೀರ್ಮಾನ ಮಾಡಿದ್ದೆ. ಆದರೆ ಈಗ ಸಿಗುತ್ತಿರುವ ಹಿಂದುತ್ವದ ಬೆಂಬಲ ಉಳಿದ ಪಕ್ಷಗಳ ಬೆಂಬಲ, ಶ್ರೀ ಸಾಮಾನ್ಯರ ಬೆಂಬಲದಿoದಾಗಿ ಖಂಡಿತವಾಗಿಯು ಗೆಲುವು ಸಾಧಿಸುತ್ತೇನೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಬೈಂದೂರಿನ ಹೆಮ್ಮಾಡಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ 60%ಕ್ಕಿಂತ ಹೆಚ್ಚಿನ ಕಾರ್ಯಕರ್ತರು ನನ್ನ ಪರವಾಗಿ ಕೆಲಸಮಾಡುತ್ತಿದ್ದಾರೆ. ನಾನು ಚುನಾವಣೆಗೆ ನಿಲ್ಲುತ್ತಿದ್ದೇನೆ ಎಂಬ ಕಾರಣಕ್ಕೆ ಬಿಜೆಪಿ ನಾಯಕರು ಅವರವರ ಕಾರ್ಯಕರ್ತರ ಮನೆಮನೆಗೆ ತೆರಳಿ ಬಿಜೆಪಿ ಪರ ಕೆಲಸ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಕಾರ್ಯಕರ್ತರ ಬೆಲೆ ಏನೆಂಬುವುದು ಈಗ ಅವರಿಗೆ ಅರ್ಥವಾಗಿದೆ ಎಂದು ಹೇಳಿದರು.
ಕಳೆದ ನಲವತ್ತು ವರ್ಷಗಳಿಂದ ಹೋರಾಟದ ಮೂಲಕ ರಾಜಕೀಯದಲ್ಲಿ ಬೆಳೆದು ಬಂದಿದ್ದೇನೆ. ಬಿಜೆಪಿ ಪಕ್ಷ ಯಡಿಯೂರಪ್ಪ ಅವರ ಮನೆಯ ಆಸ್ತಿಯಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರತಿ ಭಾಗಕ್ಕೆ ಭೇಟಿ ನೀಡುತ್ತಿದ್ದೇನೆ. ಸಮಸ್ತ ಹಿಂದು ಕಾರ್ಯಕರ್ತರು ಸಂಘಟಿತರಾಗಿ ನನ್ನನ್ನು ಬೆಂಬಲಿಸುತ್ತಿದ್ದಾರೆ. ನನ್ನ ವಿರುದ್ದ ಮಾಜಿ ಮುಖ್ಯಮಂತ್ರಿ ಕುಟುಂಬ ನಡೆಸುತ್ತಿರುವ ಯಾವ ಷಡ್ಯಂತ್ರಕ್ಕೂ ಹೆದರಲಾರೆ. ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಬಳಸಬಾರದೇನ್ನುವ ಇವರಿಗೆ ಮೋದಿ ಯಾರ ಕುಟುಂಬದ ಆಸ್ತಿಯಲ್ಲ. ಜಗತ್ತು ಕಂಡ ಒಬ್ಬ ಶ್ರೇಷ್ಟ ನಾಯಕ. ಹಿಂದುತ್ವದ ಜೊತೆಗೆ ಸಮಾನತೆ ಮೂಲಕ ಭಾರತ ದೇಶವನ್ನು ವಿಶ್ವಮಾನ್ಯದಲ್ಲಿ ಬೆಳಗಿದ ಏಕೈಕ ನಾಯಕರಾಗಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ, ನಾನು ದಾವೆ ಹೂಡಿದ್ದೇನೆ ಅಲ್ಲಿ ತೀರ್ಮಾನವಾಗಲಿದೆ ಎಂದರು.