ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೋಷಕರ ನಿರ್ಲಕ್ಷ್ಯದಿಂದ 7 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲಿ ನಡೆದಿದೆ.
ಹೌದು.ಏರ್ ಗನ್ ಇಟ್ಟುಕೊಂಡು ಆಟವಾಡುತ್ತಿದ್ದ 7 ವರ್ಷದ ಬಾಲಕ ಆಕಸ್ಮಿಕವಾಗಿ ಟ್ರಿಗರ್ ಒತ್ತಿದ್ದಾನೆ, ಗನ್ ಮಿಸ್ ಫೈರ್ ಆಗಿ ಗುಂಡು ಬಾಲಕನ ದೇಹದೊಳಗೆ ಹೊಕ್ಕಿದೆ ಪರಿಣಾಮ ವಿಷ್ಣು ಎಂಬ 7 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ಕಾಫಿ ತೋಟಗಳಲ್ಲಿ ಮಂಗಗಳನ್ನು ಹೆದರಿಸಲು ಬಳಸುತ್ತಿದ್ದ ಏರ್ ರೈಫಲ್ ಅನ್ನು ತನ್ನ ಮನೆಯ ಮುಂದೆ ವಿಷ್ಣು ಆಡುತ್ತಿದ್ದನು. ಈ ವೇಳೆ ವಿಷ್ಣು ಇದ್ದಕ್ಕಿದ್ದಂತೆ ಟ್ರಿಗರ್ ಎಳೆದಿದ್ದಾನೆ. ಪರಿಣಾಮವಾಗಿ, ಏರ್ ಗನ್ ಫೈರ್ ಆಗಿದ್ದು, ನೇರವಾಗಿ ಗನ್ನೊಳಗಿದ್ದ ಗುಂಡು ವಿಷ್ಣುವಿನ ಹೃದಯಕ್ಕೆ ಹೊಕ್ಕಿದೆ.
ಪೋಷಕರು ಮನೆಯಲ್ಲಿದ್ದಾಗ ಇಂತಹ ದುರ್ಘಟನೆ ನಡೆದಿದೆ. ಸದ್ಯ ವಿಷ್ಣು ಮೃತದೇಹವನ್ನು ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಲ್ಪ ಎಚ್ಚರ ತಪ್ಪಿದರೂ ದುರಂತ ಸಂಭವಿಸಬಹುದು ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ. ಮಕ್ಕಳಿಗೆ ಯಾವ ವಸ್ತುಗಳನ್ನು ನೀಡಬೇಕು? ಏನು ನೀಡಬಾರದು ಎಂಬುದನ್ನು ಪಾಲಕರು ಜಾಗೃತರಾಗಿ ಕಂಡುಕೊಳ್ಳಿ.