ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪ್ರಾಪ್ತ ವಯಸ್ಸಿನ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಟ್ಟದ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ರನ್ನು ಅಮಾನತುಗೊಳಿಸಲಾಗಿದೆ.
ಹೋಟೆಲ್‌ಗೆ ಕರೆಸಿ ಬೆದರಿಕೆ ಹಾಕಿ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪದ ಮೇರೆಗೆ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಕಳೆದ ವರ್ಷದ ಡಿಸೆಂಬರ್ 16ರಂದು ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆ ಮುಗಿಯುವ ಒಂದು ದಿನ ಮುನ್ನ, ತರಬೇತುದಾರನು ಫರೀದಾಬಾದ್‌ನ ಸೂರಜ್‌ಕುಂಡ್ ಪ್ರದೇಶದ ಹೋಟೆಲ್‌ಗೆ ಶೂಟರ್‌ನ್ನು ಆಹ್ವಾನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ: FOOD | ಬೇಗನೆ ರೆಡಿ ಆಗುತ್ತೆ ಎಗ್ ಪೆಪ್ಪರ್ ಡ್ರೈ! ನೀವೂ ಒಮ್ಮೆ ಟ್ರೈ ಮಾಡಿ
ಶೂಟಿಂಗ್ ಪ್ರದರ್ಶನದ ವಿಶ್ಲೇಷಣೆ ಮತ್ತು ಮುಂದಿನ ಕರಿಯರ್ ಕುರಿತು ಚರ್ಚೆ ನಡೆಸಬೇಕಿದೆ ಎಂಬ ನೆಪದಲ್ಲಿ, ಆಕೆಯನ್ನು ತನ್ನ ಕೋಣೆಗೆ ಬರಲು ಒತ್ತಡ ಹೇರಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯ ಬಗ್ಗೆ ಯಾರಿಗೂ ತಿಳಿಸಿದರೆ ಕ್ರೀಡಾ ಜೀವನ ಹಾಳು ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಘಟನೆಯಿಂದ ಆಘಾತಗೊಂಡ ಶೂಟರ್ ಕುಟುಂಬದವರಿಗೆ ವಿಷಯ ತಿಳಿಸಿದ್ದು, ತಕ್ಷಣವೇ ಪೊಲೀಸರಿಗೆ ದೂರು ನೀಡಲಾಗಿದೆ. ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ನೇಮಕ ಮಾಡಿದ್ದ 13 ರಾಷ್ಟ್ರೀಯ ಪಿಸ್ತೂಲ್ ತರಬೇತುದಾರರಲ್ಲಿ ಅಂಕುಶ್ ಭಾರದ್ವಾಜ್ ಒಬ್ಬರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಪೋಕ್ಸೊ ಸೇರಿದಂತೆ ಹಲವು ಕಠಿಣ ಕಲಂಗಳಡಿ ಎಫ್‌ಐಆರ್ ದಾಖಲಾಗಿದೆ.

