ಹೊಸದಿಗಂತ ಚಿತ್ರದುರ್ಗ:
ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿ ಆಗುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ. ಕಾಂಗ್ರೆಸ್ ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳುತ್ತೀರಾ ಎಂದು ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸಿಗರನ್ನು ಪ್ರಶ್ನಿಸಿದರು.
ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸಿದರೆ ಪ್ರಧಾನಿ ಮೋದಿ ಜೊತೆ ಸೇರಿ ಅಭಿವೃದ್ದಿ ಕೆಲಸ ಮಾಡುತ್ತಾರೆ. ಹಾಗಾಗಿ ಮತದಾರರು ಕಾರಜೋಳ ಅವರ ಬೆನ್ನಿಗೆ ನಿಂತು ಗೆಲ್ಲಿಸಬೇಕು ಎಂದರು.
ಮೈಸೂರಿನಲ್ಲಿ ದೇವೇಗೌಡ್ರು, ಮೋದಿ ಒಂದಾಗಿ ಒಗ್ಗಟ್ಟು ಪ್ರದರ್ಶನ ಮಾಡ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಎನ್.ಡಿ.ಎ.ಗೆ ಉತ್ತಮ ವಾತಾವರಣವಿದೆ. ಹಾಗಾಗಿ ಎಲ್ಲ 28 ಕ್ಷೇತ್ರಗಳಲ್ಲಿ ಎನ್.ಡಿ.ಎ. ಅಭ್ಯರ್ಥಿಗಳು ಜಯಭೇರಿ ಭಾರಿಸಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಪುಕ್ಸಟ್ಟೆ ಕಾರ್ಯಕ್ರಮ ಕೊಡ್ತಿದ್ದಾರೆ. ಜನರ ಹಣವನ್ನು ಲೂಟಿ ಮಾಡಿ ಅದೇ ಹಣದಲ್ಲಿ ಜನರಿಗೆ ಉಚಿತ ಗ್ಯಾರಂಟಿಗಳನ್ನು ನೀಡುತ್ತಿದ್ದಾರೆ. ರಾಜ್ಯ ದಿವಾಳಿಯಾಗಿದೆ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಹಣಬಲ, ಅಧಿಕಾರ ಬಲ, ಜಾತಿಯ ವಿಷಬೀಜ ಬಿತ್ತಿ ಅಧಿಕಾರಕ್ಕೆ ಬರ್ತಿದ್ದ ಕಾಲ ಮುಗಿದಿದೆ ಎಂದರು.
ನನಗೆ 82 ವರ್ಷ ಆದ್ರೂ ರಾಜ್ಯಾದ್ಯಂತ ಓಡಾಡುತ್ತಿದ್ದೇನೆ. ರಾಜ್ಯದಲ್ಲಿ 28 ಕ್ಷೇತ್ರ ಗೆದ್ದು ಎಲ್ರನ್ನು ಕರೆದುಕೊಂಡು ಹೋಗಿ ಪ್ರಧಾನಿ ನರೆಂದ್ರ ಮೋದಿ ಭೇಟಿ ಮಾಡಬೇಕು. ಕಾರಜೋಳ ಅನುಭವ ರಾಜಕಾರಣಿ ಆಗಿದ್ದಾರೆ. ಈ ಭಾಗಕ್ಕೆ ಒಂದೊಳ್ಳೆ ಕೆಲಸ ಮಾಡಲು ನಿಮ್ಮ ಆಶೀರ್ವಾದ ಬೇಕು. ಹಾಗಾಗಿ ಇಲ್ಲಿನ ಮತದಾರರು ಕಾರಜೋಳ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.