ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದಲ್ಲಿ ಇಟ್ಟಿಗೆ ಗೂಡುಗಳ ಹಿಂದೆ ಇರುವ ಕಬ್ಬಿನ ಗದ್ದೆಯಲ್ಲಿ ಅಪರಿಚಿತ ಮಹಿಳೆಯ ಅರೆಬೆತ್ತಲೆ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗ್ರಾಮಸ್ಥರು ಗದ್ದೆಯಲ್ಲಿ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ, ಮಹಿಳೆಯ ಮುಖ ಸಂಪೂರ್ಣವಾಗಿ ಸುಟ್ಟು ಹೋಗಿದ್ದರಿಂದ ಗುರುತು ಪತ್ತೆ ಕಷ್ಟಕರವಾಗಿದೆ. ಬಟ್ಟೆಗಳು ಭಾಗಶಃ ಸುಟ್ಟುಹೋಗಿದ್ದು, ದೇಹದ ಹಲವೆಡೆ ಗಂಭೀರ ಸುಟ್ಟ ಗಾಯಗಳಿವೆ.
ಇದನ್ನೂ ಓದಿ: FOOD | ವೆಜ್ ಪ್ರೋಟೀನ್ ಪ್ರಿಯರಿಗಾಗಿ ವಿಶೇಷ ಸ್ನ್ಯಾಕ್: ಕ್ರಿಸ್ಪಿ & ಸ್ಪೈಸಿ ಸೋಯಾ 65
ಪ್ರಾಥಮಿಕ ತನಿಖೆಯ ಆಧಾರದಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಸುಟ್ಟು, ಬೇರೆ ಸ್ಥಳದಿಂದ ಕಬ್ಬಿನ ಗದ್ದೆಗೆ ತಂದು ಬಿಟ್ಟಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸುತ್ತಮುತ್ತಲಿನಿಂದ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮೃತ ಮಹಿಳೆಯ ವಯಸ್ಸು ಸುಮಾರು 30 ವರ್ಷ ಇರಬಹುದೆಂದು ಅಂದಾಜಿಸಲಾಗಿದೆ. ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

