ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿಯ ಚುನಾವಣೆಯು ಮುಂದಿನ ಐದು ವರ್ಷಗಳಲ್ಲಿ ಭಾರತವನ್ನು ಬೃಹತ್ ಜಾಗತಿಕ ಶಕ್ತಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಧ್ಯಪ್ರದೇಶದ ದಾಮೋಹ್‌ನಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ದಶಕಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ರಕ್ಷಣಾ ಕ್ಷೇತ್ರವನ್ನು ದುರ್ಬಲಗೊಳಿಸಿದೆ.ಆದರೆ, ಬಿಜೆಪಿ ಸರ್ಕಾರ ರಕ್ಷಣಾ ಕ್ಷೇತ್ರವನ್ನು ಬಲಪಡಿಸುತ್ತಿದೆ ಎಂದರು.
ಬಿಜೆಪಿ ಸರ್ಕಾರವು ದೇಶದ ರಕ್ಷಣಾ ಪಡೆಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿದೆ. ಭಾರತವು ಅನೇಕ ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುತ್ತಿದೆ. ಭಯೋತ್ಪಾದನೆಯಲ್ಲಿ ತೊಡಗಿದ್ದ ನೆರೆಯ ದೇಶ ಪಾಕಿಸ್ತಾನ ಈಗ ಆಹಾರಕ್ಕಾಗಿ ಹೆಣಗಾಡುತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರವು ಬಡವರ ಕಲ್ಯಾಣಕ್ಕೆ ಬದ್ಧವಾಗಿದೆ. ದೇಶದ ಸುಮಾರು 80 ಕೋಟಿ ಫಲಾನುಭವಿಗಳಿಗೆ ಉಚಿತ ಪಡಿತರ ಯೋಜನೆಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಿದೆ. ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಲಿಷ್ಠ ಮತ್ತು ಸ್ಥಿರ ಸರ್ಕಾರವನ್ನು ಸ್ಥಾಪಿಸಲು ಮತ ಹಾಕುವಂತೆ ಮನವಿ ಮಾಡಿದ್ದಾರೆ.