ಹೊಸದಿಗಂತ ವರದಿ, ಚಿತ್ರದುರ್ಗ, :
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶ ವಿರೋಧಿ, ಹಿಂದು ವಿರೋಧಿ ಚಟುವಟಿಕೆ ಹೆಚ್ಚಾಗಿದ್ದು, ಶಾಂತಿ, ಸೌಹಾರ್ಧತೆ ಕದಡುತ್ತಿದೆ. ಭಯೋತ್ಪಾದಕತೆ ಹೆಚ್ಚಾಗುತ್ತಿದೆ. ಹಿಂದುಗಳ ಮೇಲೆ ದಬ್ಬಾಳಿಕೆ, ಕೊಲೆಯಂತಹ ಪ್ರಕರಣಗಳು ಮರುಕಳಿಸುತ್ತಿವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಜಾತ್ಯಾತೀತ ಜನತಾ ದಳದ ಯುವ ಘಟಕದ ಅಧ್ಯಕ್ಷ ಓ.ಪ್ರತಾಪ್ ಜೋಗಿ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಲವ್ ಜಿಹಾದ್, ಬಲವಂತದ ಮತಾಂತರ ಸೇರಿದಂತೆ ಹಿಂದು ವಿರೋಧಿ ಚಟುವಟಿಕೆಗಳು ಉತ್ತರ ಕರ್ನಾಟಕಕ್ಕೂ ವ್ಯಾಪಿಸಿದೆ. ಹಿಂದೂ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ. ಇಂತಹ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದ್ದಾರೆ.
ಕಳೆದ ಹತ್ತು ವರ್ಷಗಳ ಹಿಂದೆ ಬಿಹಾರದಲ್ಲಿ ನಡೆಯುತ್ತಿದ್ದ ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಘಟನೆಗಳು, ಕರ್ನಾಟಕದಲ್ಲಿ ಇಂದು ನಡೆಯುತ್ತಿವೆ. ಸರ್ಕಾರ ಬಂದ ಮೇಲೆ, ಎಂಟು ಯುವಕ ಯುವತಿಯರ ಹತ್ಯೆಯಾಗಿದೆ. ಕಾಂಗ್ರೆಸ್ ಸರ್ಕಾರ ಹಿಂದೂಗಳ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸುವ್ಯವಸ್ಥೆ ತುಂಬಾ ಹದಗೆಟ್ಟಿದೆ. ರಾಜ್ಯದಲ್ಲಿ ಹಿಂದು ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ನೇಹಾ ಹತ್ಯೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ನ್ಯಾಯ ಸಮ್ಮತವಾದ ಹೇಳಿಕೆ ನೀಡುತ್ತಿಲ್ಲ. ಕಾಂಗ್ರೆಸ್ ಕಾರ್ಪೊರೇಟ್ ಮಗಳಿಗೆ ಈ ಪರಿಸ್ಥಿತಿ ಬಂದರೆ ಇನ್ನೂ ರಾಜ್ಯದ ಹೆಣ್ಣು ಮಕ್ಕಳ ಪರಿಸ್ಥಿತಿ ಏನಾಗಬಹುದು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‌ನ ತುಷ್ಟೀಕರಣ ನೀತಿ, ದ್ವೇಷದ ರಾಜಕಾರಣ ಮಾಡುತ್ತಿದೆ ಹುಬ್ಬಳಿಯ ಕಾಂಗ್ರೆಸ್ ಕಾರ್ಪೋರೇಟರ್ ಮಗಳು ನೇಹಾ ಹಿರೇಮಠ ಅವರನ್ನು ಮತಾಂಧ ಫಯಾಜ್ ಲವ್ ಜಿಹಾದ್ ಕಾರಣಕ್ಕೆ ಹತ್ಯೆ ಮಾಡಿದರೆ, ತನಿಖೆಗೆ ಮೊದಲೇ ರಾಜ್ಯದ ಮುಖ್ಯಮಂತ್ರಿಗಳು, ಗೃಹಸಚಿವರಿಂದ ’ಪ್ರೇಮ್ ಕಹಾನಿ’ ಎಂದು ಕತೆ ಕಟ್ಟಿ ಪ್ರಕರಣವನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಕಾಂಗ್ರೆಸ್ ಓಲೈಕೆ ರಾಜಕಾರಣಕ್ಕೆ ಕಡಿವಾಣ ಹಾಕಬೇಕಿದೆ. ದುರಾಡಳಿತ ಕೊನೆಗಾಣಿಸೋಣ ಅಮಾಯಕ ಹೆಣ್ಣು ಮಕ್ಕಳ ಜೀವ ಉಳಿಸಬೇಕಿದೆ. ಹಲ್ಲೆ, ಕೊಲೆಗಳಿಗೆ ಅಂತ್ಯ ಹಾಡಬೇಕಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗಿರುವ ಸಿದ್ದರಾಮಯ್ಯ ನೇತೃತ್ವದ ಹಿಂದೂ ವಿರೋಧಿ ಸರ್ಕಾರವನ್ನು ಖಂಡಿಸಿ ಧಿಕ್ಕರಿಸಬೇಕಿದೆ ಎಂದಿದ್ದಾರೆ.
ನೇಹಾ ಹತ್ಯೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ಹಾಲಿ ನ್ಯಾಯಾಧೀಶರಿಂದ ಪೂರ್ಣ ಪ್ರಮಾಣದ ತನಿಖೆ ಮಾಡಿಸುವ ಮೂಲಕ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ.