ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರು ಜಿಲ್ಲೆಯ ಬೆಳ್ಳಾವಿ ಕ್ರಾಸ್ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರು ಕೊಪ್ಪಳ ಜಿಲ್ಲೆಗೆ ಸೇರಿದವರು ಎಂಬ ಮಾಹಿತಿ ಲಭ್ಯವಾಗಿದೆ. ತಮ್ಮ ಊರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಕ್ರೂಸರ್ ಸಂಪೂರ್ಣವಾಗಿ ನುಜ್ಜುಗೊಂಡಿದ್ದು, ಪ್ರಯಾಣಿಕರು ವಾಹನದಲ್ಲೇ ಸಿಲುಕಿಕೊಂಡಿದ್ದರು.
ಇದನ್ನೂ ಓದಿ: FOOD | ರೆಸ್ಟೋರೆಂಟ್ ಸ್ಟೈಲ್ ಕೊಕೊನಟ್ ಪ್ರಾನ್ಸ್ ಕರಿ! ಸಖತ್ ಟೇಸ್ಟಿ
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ನಿಂತಿದ್ದ ಲಾರಿಯನ್ನು ಗಮನಿಸದೆ ಕ್ರೂಸರ್ ಚಾಲಕ ವೇಗವಾಗಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೋರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

