September 19, 2026
Saturday, September 19, 2026
spot_img

ಮೈದಾನಕ್ಕಿಳಿದ ಜೂನಿಯರ್ ಸಚಿನ್: ಅರ್ಜುನ್ ಬ್ಯಾಟ್ ತೂಕ ನೋಡಿ ಬೆಚ್ಚಿಬಿದ್ದ ರಿಷಭ್ ಪಂತ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಇತ್ತೀಚೆಗಷ್ಟೇ ಉದ್ಯಮಿ ಸಾನಿಯಾ ಚಾಂದೋಕ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು, ಮದುವೆಯ ಸಂಭ್ರಮ ಮುಗಿದ ಮರುದಿನವೇ ಐಪಿಎಲ್ ಪೂರ್ವ ತರಬೇತಿ ಶಿಬಿರಕ್ಕೆ ಹಾಜರಾಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.

ತರಬೇತಿ ಅವಧಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಮತ್ತು ಅರ್ಜುನ್ ನಡುವಿನ ಸಂಭಾಷಣೆಯ ವೀಡಿಯೋ ಈಗ ವೈರಲ್ ಆಗಿದೆ. ಅರ್ಜುನ್ ಬಳಸುತ್ತಿದ್ದ 1220 ಗ್ರಾಂ (1.2 ಕೆಜಿ) ತೂಕದ ಭಾರೀ ಬ್ಯಾಟ್ ನೋಡಿ ಪಂತ್ ಶಾಕ್ ಆಗಿದ್ದಾರೆ.

ಈ ವೇಳೆ ಮಾತನಾಡಿದ ಅರ್ಜುನ್, “ನಾನು 1200 ಗ್ರಾಂ ಗಿಂತ ಕಡಿಮೆ ತೂಕದ ಬ್ಯಾಟ್ ಬಳಸುವುದಿಲ್ಲ. ನಮ್ಮ ತಂದೆ ಬರೋಬ್ಬರಿ 1315 ಗ್ರಾಂ ತೂಕದ ಬ್ಯಾಟ್ ಬಳಸುತ್ತಿದ್ದರು” ಎಂದು ಅಪ್ಪನ ಬ್ಯಾಟಿಂಗ್ ಪವರ್ ಬಗ್ಗೆ ತಿಳಿಸಿದ್ದಾರೆ.

“ಇಷ್ಟೊಂದು ಭಾರವಾದ ಬ್ಯಾಟ್ ಬಳಸುವುದರಿಂದ ಏನು ಲಾಭ?” ಎಂದು ಪಂತ್ ಕೇಳಿದಾಗ, ಅರ್ಜುನ್ ನಗುತ್ತಾ, “ನಾವು ಮಾಡಬೇಕಾದ ಕೆಲಸ ಇಷ್ಟೇ, ಚೆಂಡನ್ನು ಕೇವಲ ಟಚ್ ಮಾಡುವುದು ಮಾತ್ರ, ಉಳಿದಿದ್ದನ್ನು ಈ ಬ್ಯಾಟ್ ನೋಡಿಕೊಳ್ಳುತ್ತದೆ” ಎಂದು ಮಿಂಚಿನ ಉತ್ತರ ನೀಡಿದ್ದಾರೆ.

ತಮ್ಮ ತಂದೆ ಸಚಿನ್ ಮತ್ತು ಯುವರಾಜ್ ಸಿಂಗ್ ಅವರು ಕೂಡ ಮದುವೆಯ ಮರುದಿನವೇ ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತಿದ್ದರು ಎಂಬ ಸ್ಪೂರ್ತಿದಾಯಕ ಕಥೆಯನ್ನು ಅರ್ಜುನ್ ಹಂಚಿಕೊಂಡಿದ್ದಾರೆ. ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಪಂತ್, “ನೀವು ಬಿಡಿಪ್ಪಾ.. ತುಂಬಾ ಉತ್ಸಾಹಭರಿತರು” ಎಂದು ಕಾಲೆಳೆದಿದ್ದಾರೆ.

ಐಪಿಎಲ್ 2023 ಮತ್ತು 2024ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಅರ್ಜುನ್, ಈಗ ಲಕ್ನೋ ತಂಡದ ಪರ ಹೊಸ ಸೀಸನ್‌ನಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !