ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬಾಯ್ಲರ್ ಸ್ಫೋಟ ಪ್ರಕರಣವು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಭೀಕರ ದುರಂತದಲ್ಲಿ ಎಂಟು ಮಂದಿ ಕಾರ್ಮಿಕರು ಜೀವ ಕಳೆದುಕೊಂಡರೂ, ಕಾರ್ಖಾನೆ ಆಡಳಿತದ ನಿಲುವು ಕುಟುಂಬಸ್ಥರ ವೇದನೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪರಿಹಾರದ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಪ್ರಕಟಿಸದಿರುವುದರಿಂದ ಕಾರ್ಖಾನೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ಸ್ಫೋಟದಲ್ಲಿ ಮೃತಪಟ್ಟ ಎಂಟು ಕಾರ್ಮಿಕರ ಪೈಕಿ ಕೇವಲ ಒಬ್ಬರ ಕುಟುಂಬಕ್ಕೆ ಮಾತ್ರ ಪರಿಹಾರ ಘೋಷಿಸಿರುವುದಾಗಿ ತಿಳಿದುಬಂದಿದೆ. ಮೃತ ಮಂಜುನಾಥ ಕಾಜಗಾರ್ ಅವರ ಕುಟುಂಬಕ್ಕೆ 18 ಲಕ್ಷ ರೂ. ಪರಿಹಾರ ನೀಡುವುದಾಗಿ ಕಾರ್ಖಾನೆ ಮೌಖಿಕ ಭರವಸೆ ನೀಡಿದೆ ಎನ್ನಲಾಗಿದೆ. ಆದರೆ ಉಳಿದ ಮೃತರ ಕುಟುಂಬಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಘೋಷಣೆ ಇದುವರೆಗೂ ಹೊರಬಿದ್ದಿಲ್ಲ.
ಇದನ್ನೂ ಓದಿ: Kitchen tips | ಹೂಕೋಸು ಕ್ಲೀನ್ ಮಾಡೋದು ಕಷ್ಟನಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ಈ ಹಿನ್ನೆಲೆ ಬೈಲಹೊಂಗಲದಲ್ಲಿ ಗ್ರಾಮಸ್ಥರು ಮತ್ತು ಮೃತರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತೆ ವರ್ತಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇನಾಮ್‌ದಾರ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಈವರೆಗೂ ಸ್ಪಷ್ಟ ಹೇಳಿಕೆ ನೀಡದೇ ಇರುವುದರಿಂದ, ಮೃತರ ಕುಟುಂಬಗಳಿಗೆ ನ್ಯಾಯ ಸಿಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂಬ ಒತ್ತಾಯ ಹೆಚ್ಚುತ್ತಿದೆ.

