ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯ ಶೇಕಡಾವಾರು ಮತ ಪ್ರಮಾಣ ದಿಢೀರ್ ಏರಿಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಅವರಿಗೆ ಸಂಶಯಕ್ಕೆ ಕಾರಣವಾಗಿದೆ. ಮತ್ತೆ ಇವಿಎಂ (EVM) ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗವು ಈ ಹಿಂದೆ ಬಿಡುಗಡೆ ಮಾಡಿದ್ದ ಮತ ಪ್ರಮಾಣಕ್ಕಿಂತ ಸುಮಾರು 5.75% ಮತದಾನ ಹೆಚ್ಚಳವಾಗಿದೆ. ಮತ ಪ್ರಮಾಣ ದಿಢೀರ್ ಹೆಚ್ಚಳವಾಗಿದ್ದು ಆತಂಕಕಾರಿಯಾಗಿದೆ ಎಂದು ಹೇಳಿದರು.
ಮತದಾನದ ಶೇಕಡಾವಾರು ಹಠಾತ್ ಹೆಚ್ಚಳವು ಇವಿಎಂಗಳ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಆತಂಕಗಳನ್ನು ಹುಟ್ಟುಹಾಕುತ್ತದೆ. ದೀರ್ಘಕಾಲದವರೆಗೆ ಹಲವಾರು ಇವಿಎಂಗಳು ನಾಪತ್ತೆಯಾಗಿರುವುದರಿಂದ ಬಿಜೆಪಿಯು ಫಲಿತಾಂಶಗಳನ್ನು ದುರ್ಬಳಕೆ ಮಾಡುವ ಸಾಧ್ಯತೆಯಿದೆ ಎಂದು ಆರೋಪಿಸಿದರು.
ಬಿಜೆಪಿ (BJP) ಚುನಾವಣೆಯನ್ನು ಗೆಲ್ಲಲು ಯಾವುದೇ ಹಂತಕ್ಕೆ ಇಳಿಯಬಹುದಾದ್ದರಿಂದ ಇವಿಎಂ ತಯಾರಕರ ವಿವರಗಳನ್ನು ಚುನಾವಣಾ ಆಯೋಗ ಸಾರ್ವಜನಿಕಗೊಳಿಸಬೇಕು ಎಂದು ಅವರು ಆಗ್ರಹಿಸಿದರು.