ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌ನಲ್ಲಿ ತಿರುವುಗಳು ಬರುತ್ತಲೇ ಇವೆ.
ಪ್ರಜ್ವಲ್ ಅಶ್ಲೀಲ ವಿಡಿಯೋ ನೀಡಿದ್ದು ನಾನೇ ಎಂದು ಹೇಳಿಕೊಂಡಿದ್ದ ಮಾಜಿ ಡ್ರೈವರ್ ಕಾರ್ತಿಕ್ ಇದೀಗ ಇದ್ದಕ್ಕಿದ್ದಂತೆಯೇ ಕಾಣೆಯಾಗಿದ್ದಾರೆ. ದೊಡ್ಡ ವಿಡಿಯೋ ಒಂದನ್ನು ಮಾಡಿದ್ದ ಕಾರ್ತಿಕ್ ನಾನು ಹೊಳೆನರಸೀಪುರ ಬಿಜೆಪಿ ಮುಖಂಡ ದೇವರಾಜೇಗೌಡಗೆ ಪೆನ್‌ಡ್ರೈವ್ ಕೊಟ್ಟಿದ್ದೆ. ಅವರನ್ನು ನಂಬಿದ್ದೆ. ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಿ ಎಲ್ಲ ವಿಷಯವನ್ನು ಎಳೆ ಎಳೆಯಾಗಿ ವಿವರಿಸುತ್ತೇನೆ ಎಂದು ಕಾರ್ತಿಕ್ ಹೇಳಿದ್ದರು.
ಆದರೆ ಇದೀಗ ಕಾರ್ತಿಕ್ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೊಳೆನರಸೀಪುರ ತಾಲೂಕಿನ ಕಡುವಿನಕೋಟೆ ನಿವಾಸಿ ಕಾರ್ತಿಕ್, ಪ್ರಜ್ವಲ್ ಬಳಿ ಕಾರು ಚಾಲಕನಾಗಿ 13 ವರ್ಷ ಕೆಲಸ ಮಾಡಿದ್ದರು. 2 ದಿನದ ಹಿಂದೆ SIT ಮುಂದೆ ಹಾಜರಾಗೋದಾಗಿ ವಿಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದರು.
ಪೆನ್‌ಡ್ರೈವ್ ಬಗ್ಗೆ ಹೊಳೆನರಸೀಪುರ ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿಕೆ ಬೆನ್ನಲ್ಲೇ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ದೇವರಾಜೇಗೌಡ ಹೇಳಿಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಕಾರ್ತಿಕ್, ನಾನು ಬಿಜೆಪಿ ಮುಖಂಡ ದೇವರಾಜೇಗೌಡ ಬಿಟ್ಟರೆ ಬೇರೆ ಯಾರಿಗೂ ವಿಡಿಯೋ, ಫೋಟೋಗಳನ್ನು ಹಂಚಿಕೊಂಡಿಲ್ಲ ಎಂದು ಹೇಳಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್ಗೆ SIT ನೋಟಿಸ್ ಸಹ ನೀಡಿತ್ತು. ಆದರೆ ಇದೀಗ ಎಸ್ಕೇಪ್ ಆಗಿದ್ದಾರೆ.