Sunday, January 11, 2026

ಮುಂದಿನ ಪೀಳಿಗೆಗೆ ‘ಪರಮಾತ್ಮ’ನ ಸಂದೇಶ: ಶಾಲಾ ಪುಸ್ತಕದಲ್ಲಿ ಅಪ್ಪು ಸಾಧನೆಯ ಹೆಜ್ಜೆಗುರುತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದ ಧ್ರುವತಾರೆ, ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಜೀವನ ಮತ್ತು ಸಾಧನೆಗಳು ಇನ್ನು ಮುಂದೆ ಕೇವಲ ಬೆಳ್ಳಿತೆರೆಗೆ ಸೀಮಿತವಾಗದೆ, ಶಾಲಾ ಮಕ್ಕಳ ಪಾಠದ ಭಾಗವಾಗಲಿವೆ. ಹೌದು, ಪವರ್ ಸ್ಟಾರ್ ಅವರ ಸ್ಫೂರ್ತಿದಾಯಕ ಬದುಕಿನ ಕಥೆಯನ್ನು ರಾಜ್ಯದ ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸಲು ಕರ್ನಾಟಕ ಪಠ್ಯಪುಸ್ತಕ ಸಂಘವು ನಿರ್ಧರಿಸಿದೆ.

1975ರ ಮಾರ್ಚ್ 17ರಂದು ಜನಿಸಿದ ಪುನೀತ್, ಬಾಲನಟನಾಗಿಯೇ ಕ್ಯಾಮರಾ ಎದುರಿಸಿದವರು. ‘ಬೆಟ್ಟದ ಹೂವು’ ಚಿತ್ರದ ಅದ್ಭುತ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಅಪ್ಪು, 2002ರಲ್ಲಿ ‘ಅಪ್ಪು’ ಸಿನಿಮಾ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು. ಸುಮಾರು ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಮಿಂಚಿದ ಅವರು, 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಕೇವಲ ಸಿನಿಮೀಯ ಸಾಧನೆ ಮಾತ್ರವಲ್ಲದೆ, ಪುನೀತ್ ಅವರ ಸದ್ದಿಲ್ಲದ ಸಮಾಜ ಸೇವೆ, ಶಿಕ್ಷಣಕ್ಕೆ ಅವರು ನೀಡುತ್ತಿದ್ದ ಪ್ರೋತ್ಸಾಹ ಮತ್ತು ಮರಣೋತ್ತರ ‘ಕರ್ನಾಟಕ ರತ್ನ’ ಗೌರವದ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯ ಸಂದರ್ಭದಲ್ಲಿ ಈ ಮಹತ್ವದ ಬದಲಾವಣೆಯನ್ನು ತರಲಾಗುತ್ತಿದೆ.

ಸರ್ಕಾರದ ಈ ನಿರ್ಧಾರಕ್ಕೆ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, “ಸರ್ಕಾರದ ಈ ಗೌರವ ನಮಗೆ ತುಂಬಾ ಖುಷಿ ತಂದಿದೆ. ನಮ್ಮ ಮಕ್ಕಳಿಗೆ ಇದು ತಂದೆಗೆ ಸಿಕ್ಕ ಅತಿದೊಡ್ಡ ಗೌರವ ಎಂದು ತಿಳಿದಿದೆ. ಚಿತ್ರರಂಗದಲ್ಲಿ ಅನೇಕರಿದ್ದರೂ, ಇಂತಹ ಗೌರವ ಸಿಗುವುದು ವಿರಳ” ಎಂದು ಧನ್ಯವಾದ ಅರ್ಪಿಸಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!