ಹೊಸದಿಗಂತ ಡಿಜಿಟಲ್ ಡೆಸ್ಕ್:
ಗ್ಯಾನವ್ಯಾಪಿ ಮಸೀದಿ, ಮಥುರಾ ಶ್ರೀಕೃಷ್ಣ ಮಂದಿರದ ಆವರಣದಲ್ಲಿರುವ ಈದ್ಗಾ ಮಸೀದಿ, ಬೋಜಶಾಲಾ ದೇವಾಲಯ ಸಂಕೀರ್ಣ ಸೇರಿದಂತೆ ಹಲವು ಮಸೀದಿ ಹಾಗೂ ದರ್ಗಾ ವಿರುದ್ದದ ಪ್ರಕರಣಗಳ ಸಾಲಿಗೆ ಪ್ರಸಿದ್ಧ ಫತೇಪುರ್ ಸಿಕ್ರಿ ದರ್ಗಾ ಸೇರಿಕೊಂಡಿದೆ.
ಫತೇಪುರ್ ಸಿಕ್ರಿ ದರ್ಗಾ ಅಡಿಯಲ್ಲಿ ಮಾ ಕಾಮಾಕ್ಯ ದೇವಿ ಹಿಂದು ದೇವಾಲಯದ ಕುರುಹುಗಳಿವೆ ಎಂದು ಆಗ್ರಾ ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದ್ದು, ವಿಚಾರಣೆಗೆ ಗ್ರೀನ್ ಸಿಗ್ನಲ್ ನೀಡಿದೆ.
ವಕೀಲ ಅಜಯ್ ಪ್ರತಾಪ್ ಸಿಂಗ್ ಪ್ರಕರಣ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಆಗ್ರಾ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಅಜಯ್ ಪ್ರತಾಪ್ ಸಿಂಗ್, ಸಲೀಂ ಚಿಸ್ತಿ ದರ್ಗಾ ಆಡಳಿತ ನೋಡಿಕೊಳ್ಳುತ್ತಿರುವ ಉತ್ತರ ಪ್ರದೇಶ ಕೇಂದ್ರ ಸುನ್ನಿ ವಕ್ಫ್ ಬೋರ್ಡ್, ಜಾಮಾ ಮಸೀದಿ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದಾರೆ. ಸದ್ಯ ಫತೇಪುರ್ ಸಿಕ್ರಿ ದರ್ಗಾ ಭಾರತೀಯ ಪುರಾತತ್ವ ಇಲಾಖೆ ಅಡಿಯಲ್ಲಿರುವ ಈ ಆಸ್ತಿಯನ್ನು ಸುನ್ನಿ ವಕ್ಫ್ ಬೋರ್ಡ್, ಜಾಮಾ ಮಸೀದಿ ಆಡಳಿತ ಮಂಡಳಿ ಕಬ್ಜಾ ಮಾಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಫತೇಪುರ್ ಸಿಕ್ರಿಯ ಮೂಲ ಹೆಸರು ಸಿಕ್ರಿ. ವಿಜಯಪುರ ಸಿಕ್ರಿ ಎಂದೂ ಕರೆಯುತ್ತಾರೆ. ಇದು ಈ ಪ್ರದೇಶವನ್ನು ಆಡಳಿತ ಮಾಡಿದ ಸಿಕಾವಾರ್ ಕ್ಷತ್ರಿಯಾ ರಾಜನಿಂದ ಈ ಹೆಸರು ಬಂದಿದೆ. ಮಾ ಕಾಮಾಕ್ಯ ದೇವಿಯ ಗರ್ಭಗುಡಿಯ ಮೇಲೆ ಫತೇಪುರ್ ಸಿಕ್ರಿ ದರ್ಗಾ ನಿರ್ಮಿಸಲಾಗಿದೆ. ಅಕ್ಬರ್ ಕಾಲದಲ್ಲಿ ಈ ದೇವಾಲಯ ಧ್ವಂಸ ಮಾಡಿ ದರ್ಗಾ ನಿರ್ಮಿಸಲಾಗಿದೆ. ಈ ಕುರಿತು ಬಾಬರ್ ನಾಮದಲ್ಲಿ ಉಲ್ಲೇಖವಿದೆ ಎಂದು ಅಜಯ್ ಪ್ರತಾಪ್ ಸಿಂಗ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.