Sunday, January 11, 2026

ಡಿವೋರ್ಸ್‌ ಆದವಳಿಗೆ ಬಾಳು ಕೊಡ್ತೀನಿ ಎಂದು ಬಂದು ಜೀವನವನ್ನೇ ಬರ್ಬಾದ್‌ ಮಾಡಿ ಹೋದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ಬನಶಂಕರಿಯಲ್ಲಿ ವ್ಯಕ್ತಿಯೊಬ್ಬ ವಿಚ್ಛೇದಿತ ಮಹಿಳೆಗೆ ಬಾಳು ಕೊಡುವುದಾಗಿ ಆಕೆ ಜತೆ ಸಂಸಾರ ನಡೆಸಿ ಮಗು ಜನಿಸಿದ ಬಳಿಕ, ಚಿನ್ನಾಭರಣ ಸೇರಿ ಸುಮಾರು 36 ಲಕ್ಷ ರೂಪಾಯಿ ಪಡೆದು ಬಳಿಕ ಪರಾರಿಯಾದ ಆರೋಪ ಕೇಳಿಬಂದಿದೆ. ಬನಶಂಕರಿಯ ಮೋಹನ್ ರಾಜ್ ಎಂಬಾತನ ವಿರುದ್ಧ ಮಹಿಳೆ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಂತ್ರಸ್ತೆ ಹೇಳುವಂತೆ, ಕಳೆದ 10 ವರ್ಷಗಳಿಂದ ಮೋಹನ್ ರಾಜ್ ಪರಿಚಯವಿದ್ದು, 2022ರಲ್ಲಿ ಇಬ್ಬರ ನಡುವೆ ಮದುವೆ ನಡೆದಿತ್ತು. 2023ರ ಫೆಬ್ರವರಿಯಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಆದರೆ 2025ರಲ್ಲಿ ಏಕಾಏಕಿ ಮನೆ ಬಿಟ್ಟು ಹೋದ ಮೋಹನ್ ರಾಜ್ ಇಂದಿಗೂ ಪತ್ತೆಯಾಗಿಲ್ಲ.

ಮದುವೆಯಾದ ಬಳಿಕ ಹೊಸ ಮನೆ ಕಟ್ಟೋಣ, ಹೊಸ ಜೀವನ ಶುರು ಮಾಡೋಣ ಎಂದು ನಂಬಿಸಿ ಮಹಿಳೆಯಿಂದ ಹಣ ಪಡೆದಿದ್ದಾನೆ ಎಂಬ ಆರೋಪವಿದೆ. ಚಿನ್ನಾಭರಣ ಅಡವಿಟ್ಟು, ಸಾಲ ಪಡೆದು ಒಟ್ಟು 36 ಲಕ್ಷ ರೂಪಾಯಿ ನೀಡಿದ್ದೇನೆ ಎಂದು ಮಹಿಳೆ ದೂರಿದ್ದಾರೆ. ಈಗ ಹಣ ಕೇಳಿದರೆ ‘ನೀನು ಯಾರು ಅಂತಲೇ ಗೊತ್ತಿಲ್ಲ’ ಎಂದು ಹೇಳುತ್ತಾನೆ ಎಂದು ಆರೋಪಿಸಿದ್ದಾರೆ.

ನ್ಯಾಯ ಕೇಳಲು ಮೋಹನ್ ರಾಜ್ ಮನೆ ಬಳಿ ಹೋದಾಗ ಹಲ್ಲೆ ನಡೆಸಲಾಗಿದೆ ಎನ್ನುವ ಆರೋಪವೂ ಕೇಳಿಬಂದಿದೆ. ಈವರೆಗೆ ನಾಲ್ಕು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ನ್ಯಾಯ ಸಿಗುತ್ತಿಲ್ಲ. ಮತ್ತೊಮ್ಮೆ ದೂರು ನೀಡಿದರೆ ‘ನಿನ್ನನ್ನೇ ಒಳಗೆ ಹಾಕ್ತೀವಿ’ ಎಂದು ಪೊಲೀಸರು ಹೆದರಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಪೊಲೀಸರೊಂದಿಗೆ ಆರೋಪಿಗೆ ನಂಟಿದೆ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಕೊನೆಗೆ ಇದೀಗ ಆರೋಪಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಸಂತ್ರಸ್ತೆಯು 2021ರಲ್ಲಿ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದರು. ಮೊದಲ ಮದುವೆಯ ವಿಚಾರ ಸಂಪೂರ್ಣವಾಗಿ ತಿಳಿದಿದ್ದರೂ ಮೋಹನ್ ರಾಜ್ ಮದುವೆಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಮೊದಲ ಪತಿಗೆ ಅನಾರೋಗ್ಯ ಸಮಸ್ಯೆ ಇದ್ದುದರಿಂದ ವಿಚ್ಛೇದನ ಪಡೆದಿದ್ದೆ ಎಂದು ಮಹಿಳೆ ಸ್ಪಷ್ಟಪಡಿಸಿದ್ದಾರೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!