ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಬೈನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರೋರ್ವ ತಾನು ವಿಮಾನದಿಂದ ಜಿಗಿಯುವುದಾಗಿ ಸಿಬ್ಬಂದಿಗೆ ಧಮ್ಕಿ ನೀಡಿದ್ದು, ಈ ಘಟನೆ ಕೆಲಕಾಲ ಆತಂಕಕ್ಕೆ ಕಾರಣವಾಯಿತು.
ಈ ಬಗ್ಗೆ ಕೇರಳದ ಕಣ್ಣೂರಿನ ನಿವಾಸಿ ಎನ್ನಲಾದ ಮುಹಮ್ಮದ್ ಬಿ.ಸಿ. (24) ವಿರುದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಭದ್ರತಾ ಸಂಯೋಜಕ ಸಿದ್ದಾರ್ಥ ದಾಸ್ ನೀಡಿದ ದೂರಿನಂತೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏರ್ ಇಂಡಿಯಾ ವಿಮಾನ ದುಬೈನಿಂದ ಮಂಗಳೂರಿಗೆ ಪ್ರಯಾಣ ಬೆಳೆಸುತ್ತಿತ್ತು.
ಈ ವೇಳೆ ಮುಹಮ್ಮದ್ ಶೌಚಾಲಯಕ್ಕೆ ತೆರಳಿದ್ದು ಬಳಿಕ ಹೊರಬಂದು ವಿಮಾನದ ಪ್ರಯಾಣಿಕರಲ್ಲದ ವ್ಯಕ್ತಿ ಬಗ್ಗೆ ಸಿಬಂದಿಗಳ ಬಳಿ ವಿಚಾರಿಸಿದ್ದಲ್ಲದೆ ಅಸಂಬದ್ಧ ಪ್ರಶ್ನೆಗಳ ಮೂಲಕ ವಿಮಾನದ ಸಿಬ್ಬಂದಿಗಳಿಗೆ ತೊಂದರೆ ನೀಡಿದ್ದರು. ಇಷ್ಟಲ್ಲದೆ ವಿಮಾನದಲ್ಲಿ ಪರಿಚಾರಕ ಸಿಬ್ಬಂದಿ ಆತನ ಬಳಿಯೇ ಇದ್ದರೂ ಪದೇ ಪದೇ ಕಾಲಿಂಗ್ ಬಟನ್ ಪ್ರೆಸ್ ಮಾಡಿ ವಿಮಾನದಲ್ಲಿದ್ದ ಲೈಫ್ ಜಾಕೆಟ್ ತೆಗೆದು ಸಿಬ್ಬಂದಿಯವರ ಕೈಗೆ ನೀಡಿ, ವಿಮಾನ ಇಳಿದ ನಂತರ ಇದನ್ನು ಬಳಸುವುದಾಗಿ ತಿಳಿಸಿರುತ್ತಾನೆ. ಬಳಿಕ ವಿಮಾನ ಸಮುದ್ರದ ಮೇಲಿರುವಾಗ ತಾನು ವಿಮಾನದಿಂದ ಹೊರಗಿಳಿಯಬೇಕು, ಹಾರಬೇಕು ಎಂದು ಧಮ್ಕಿ ಹಾಕಿ ಇತರ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದುರಿನಲ್ಲಿ ಹೇಳಲಾಗಿದೆ.
ವಿಮಾನ ಸುರಕ್ಷಿತವಾಗಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಇದಾದ ಬಳಿಕವೂ ಆತ ವಿಮಾನ ನಿಲ್ದಾಣದ ಸಿಬ್ಬಂದಿ ಜೊತೆಗೂ ಅನುಚಿತವಾಗಿ ವರ್ತಿಸಿದ್ದು, ನಿಲ್ದಾಣದ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಬಜ್ಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.