ಹೊಸದಿಗಂತ ಡಿಜಿಟಲ್ ಡೆಸ್ಕ್:
ವುಮೆನ್ಸ್ ಪ್ರೀಮಿಯರ್ ಲೀಗ್ 2026ರ ನಾಲ್ಕನೇ ಆವೃತ್ತಿ ಆರಂಭವೇ ಅಭಿಮಾನಿಗಳಿಗೆ ಅದ್ಬುತ ರೋಚಕತೆಯನ್ನು ನೀಡಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಪಂದ್ಯದಲ್ಲೇ ಗೆಲುವಿನ ಸಂಭ್ರಮ ಆಚರಿಸಿದೆ.
ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. 155 ರನ್ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಕೊನೆಯ ಓವರ್‌ನಲ್ಲಿ 18 ರನ್ ಅಗತ್ಯವಿತ್ತು.
ಇದನ್ನೂ ಓದಿ: FOOD | ಚಪಾತಿ ಗೋಧಿಹಿಟ್ಟಿನಿಂದ ಮಾತ್ರ ಮಾಡೋದಲ್ಲ ರವೆಯಿಂದಾನೂ ಮಾಡ್ಬಹುದು!
ಅಂತಿಮ ಕ್ಷಣಗಳಲ್ಲಿ ನಡಿನ್ ಡಿ ಕ್ಲರ್ಕ್ ಅಬ್ಬರದ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಆರ್‌ಸಿಬಿ ಕಡೆಗೆ ತಿರುಗಿಸಿದರು. ನಾಟ್ ಸ್ಕೀವರ್ ಬ್ರಂಟ್ ಎಸೆದ ಕೊನೆಯ ಓವರ್‌ನಲ್ಲಿ 6, 4, 6, 4 ಸಿಡಿಸಿ ಮೂರು ವಿಕೆಟ್‌ಗಳ ರೋಚಕ ಜಯವನ್ನು ತಂಡಕ್ಕೆ ತಂದುಕೊಟ್ಟರು.
ಪಂದ್ಯದ ನಂತರ ಮಾತನಾಡಿದ ಸ್ಮೃತಿ ಮಂಧಾನ, ಸೀಸನ್ ಆರಂಭದಲ್ಲೇ ಇಂತಹ ರೋಮಾಂಚಕ ಗೆಲುವು ಖುಷಿ ತಂದಿದೆ ಎಂದರು. ಆರ್‌ಸಿಬಿ ಎಂದರೆ ಥ್ರಿಲ್ಲರ್‌ಗಳಿಗೆ ಹೆಸರುವಾಸಿ ಎಂದು ಹೇಳಿದ ಅವರು, ಈ ಗೆಲುವಿನ ಶ್ರೇಯಸ್ಸು ನಡಿನ್ ಡಿ ಕ್ಲರ್ಕ್ ಅವರ ಅದ್ಭುತ ಆಲ್‌ರೌಂಡ್ ಪ್ರದರ್ಶನಕ್ಕೆ ಸಲ್ಲಬೇಕು ಎಂದು ಪ್ರಶಂಸಿಸಿದರು.
ಈ ಸಕಾರಾತ್ಮಕ ಆರಂಭ ಮುಂದಿನ ಪಂದ್ಯಗಳಲ್ಲೂ ಮುಂದುವರಿಯಲಿದೆ ಎಂಬ ವಿಶ್ವಾಸವನ್ನು ಆರ್‌ಸಿಬಿ ನಾಯಕಿ ವ್ಯಕ್ತಪಡಿಸಿದರು.

