ಆನೆ ದಾಳಿ ಪರಿಣಾಮ: ಕಷ್ಟಪಟ್ಟು ಬೆಳೆದ ಲಕ್ಷಾಂತರ ರೂ. ಬೆಳೆ ನಾಶ, ರೈತ ಆತ್ಮಹತ್ಯೆ

ಹೊಸದಿಗಂತ ಹಾಸನ:

ಅವರಿವರ ಬಳಿ ಸಾಲ ಮಾಡಿ ಕಷ್ಟಪಟ್ಟು ಬೆಳೆದಿದ್ದ ಶುಂಠಿ,ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಕಾಡಾನೆಗಳ ಹಿಂಡು ತುಳಿದು ನಾಶ ಮಾಡಿದ ಪರಿಣಾಮ ಲಕ್ಷಾಂತರ ರೂ. ನಷ್ಟ ಉಂಟಾಗಿ ಮನನೊಂದ ನಮ್ಮ ತಂದೆ ವಿಷಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಪುತ್ರ ಸುಚಿತ್ ನೊಂದು ನುಡಿದರು.

ಬೇಲೂರು ತಾಲೂಕಿನ ಅರೇಹಳ್ಳಿ ಹೋಳಿಯ ಚಿಕ್ಕಸಾಲಾವರದ ಬಾವಿಕಟ್ಟೆ ಗ್ರಾಮದ 55 ವರ್ಷದ ರೈತ ಮಹೇಶ್‌ರವರು ಆನೆ ದಾಳಿ ಪರಿಣಾಮ ಬೆಳೆನಷ್ಟದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಸಂಘ ಸಂಸ್ಥೆ,ಬ್ಯಾಂಕ್ ಹಾಗೂ ಖಾಸಗಿ ವ್ಯಕ್ತಿಗಳಿಂದ ಕೈಸಾಲ ಪಡೆದು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಶುಂಠಿ, ಜೋಳದಂತಹ ಬೆಳೆಯನ್ನು ಬೆಳೆದಿದ್ದರು.

ಹಲವಾರು ದಿನಗಳಿಂದ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಬುಧವಾರ ರಾತ್ರಿ ನಮ್ಮ ಜಮೀನಿಗೆ ದಾಳಿ ಮಾಡಿ ಕಷ್ಟ ಪಟ್ಟು ಬೆಳೆದಿದ್ದ ಬೆಳೆಯನ್ನು ತುಳಿದು ನಾಶ ಮಾಡಿದೆ. ಹೀಗಾಗಿ ಮಾಡಿದ್ದ ಸಾಲವನ್ನು ತೀರಿಸುವುದು ಹೇಗೆ ಚಿಂತೆಯಲ್ಲಿ ಬೇಸರದಿಂದ ಮನೆಗೆ ಬಂದು ಕ್ರಿಮಿನಾಶಕವನ್ನು ಸೇವಿಸಿದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರೂ ಸಹ ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ ಎಂದರು.

ಮೃತರ ಸಂಬಂಧಿ ಶಿವಕುಮಾರ್ ಮಾತನಾಡಿ, ಕಾಡಾನೆಗಳು ಈ ಭಾಗಕ್ಕೆ ಬಂದು ಹಲವಾರು ದಿನಗಳು ಕಳೆದಿವೆ. ಆದರೆ ಆನೆ ಕಾರ್ಯಪಡೆ ತಂಡ ಹಾಗೂ ಅರಣ್ಯ ಇಲಾಖೆಯವರು ಆನೆಗಳನ್ನು ಬೇರೆಡೆಗೆ ಓಡಿಸಲು ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿ ಆನೆಗಳಿಗೆ ಹೆದರಿ ಕೂಲಿ ಕಾರ್ಮಿಕರು ತೋಟಗಳಿಗೆ ಬಂದು ಕೆಲಸ ಮಾಡಲು ಭಯಪಡುತ್ತಾರೆ. ಮಾನ್ಯ ಬೇಲೂರು ಶಾಸಕರು, ಅರಣ್ಯ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿಯಿಂದ ಲಕ್ಷಾಂತರ ರೂ. ನಷ್ಟವುಂಟಾಗಿ ಮನನೊಂದು ಮೃತಪಟ್ಟ ಮಹೇಶ್‌ರವರ ಬಡಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸಿಕೊಡಬೇಕೆಂದು ಮನವಿ ಮಾಡುತ್ತೇನೆ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!