ಪತಂಜಲಿ ಕೇಸ್‌: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಯೋಗ ಗುರು ಬಾಬಾ ರಾಮ್‌ದೇವ್‌(Baba Ramdev) ಅವರ ಆಪ್ತ ಬಾಲಕೃಷ್ಣ ಮತ್ತು ಪತಂಜಲಿ ಸಂಸ್ಥೆ (Patanjali Case)ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ತೀರ್ಪನ್ನು ಸುಪ್ರೀಂಕೋರ್ಟ್‌(Supreme Court) ಕಾಯ್ದಿರಿಸಿದೆ.

ಈ ವೇಳೆ ಮಾಧ್ಯಮಗಳಲ್ಲಿ ಕೋರ್ಟ್‌ ಮಾಡಿರುವ ಅವಲೋಕನಗಳ ಬಗ್ಗೆ ಹೇಳಿಕೆ ನೀಡಿದಕ್ಕಾಗಿ ಕ್ಷಮೆಯಾಚಿಸಿ ಭಾರತೀಯ ಮೆಡಿಕಲ್‌ ಅಸೋಸಿಯೇಶನ್‌ನ ಅಧ್ಯಕ್ಷ ಡಾ.ಆರ್‌.ವಿ.ಅಶೋಕನ್‌ ಸಲ್ಲಿಸಿರುವ ಅರ್ಜಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಹಿಮಾ ಕೋಹ್ಲಿ ಮತ್ತು ಅಸಾದುದ್ದೀನ್‌ ಅಮಾನುಲ್ಲಾ ಇದ್ದ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಫಿಡವಿಟ್‌ ಸಲ್ಲಿಸಲು ಮೂರು ವಾರಗಳ ಗಡುವನ್ನು ಪತಂಜಲಿ ಸಂಸ್ಥೆಗೆ ಕೋರ್ಟ್‌ ನೀಡಿದೆ.

ಬಾಬಾ ರಾಮ್‌ದೇವ್‌ ಅವರಿಗೆ ಸಾಕಷ್ಟು ಪ್ರಭಾವ ಇದೆ ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ. ಯೋಗ ಕ್ಷೇತ್ರಕ್ಕೆ ಅವರು ಉತ್ತಮ ಕೊಡುಗೆ ನೀಡಿದ್ದಾರೆ. ಆದರೆ ಪತಂಜಲಿ ಉತ್ಪನ್ನಗಳ ವಿಚಾರ ಬೇರೆಯಾಗಿದೆ ಎಂದು ಹೇಳಿದರು.

ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶಗಳ ಕುರಿತು ಪತ್ರಿಕೆಗಳಿಗೆ ಸಂದರ್ಶನ ನೀಡಿದ್ದಕ್ಕಾಗಿ ಐಎಂಎ ಅಧ್ಯಕ್ಷ ಡಾ ಆರ್‌ವಿ ಅಶೋಕನ್ ಅವರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಅವರು ಕ್ಷಮೆ ಕೋರಿ ಸಲ್ಲಿಸಿರುವ ಅಫಿಡವಿಟ್‌ನೊಂದಿಗೆ ಸಮಾಧಾನಕರವಾಗಿಲ್ಲ ಎಂದು ಹೇಳಿದೆ. ಪತಂಜಲಿ ಮಾಡಿದಂತೆಯೇ ನೀವೂ ಮಾಡುತ್ತಿದ್ದೀರಿ. ನೀವು ಜನಸಾಮಾನ್ಯರಲ್ಲ, ಅಂತಹ ವಿಷಯಗಳ ಪರಿಣಾಮಗಳು ನಿಮಗೆ ತಿಳಿದಿಲ್ಲವೇ?ನಾವು ವಾಕ್ ಸ್ವಾತಂತ್ರ್ಯವನ್ನು ಎತ್ತಿ ಹಿಡಿದವರಲ್ಲಿ ಮೊದಲಿಗರು. ಆದರೆ ಕೆಲವು ಸಂದರ್ಭಗಳಲ್ಲಿ ಸ್ವಯಂ ಸಂಯಮ ಇರಬೇಕು. IMA ಅಧ್ಯಕ್ಷರಾಗಿ ನೀವು ಸ್ವಯಂ ಸಂಯಮವನ್ನು ಹೊಂದಿರಬೇಕು. ನಿಮ್ಮಿಂದ ನಾನು ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!