ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಟೂರ್ನಿಯಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಈ ನಡುವೆ ಇತ್ತೀಚೆಗೆ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್10 ವಿಕೆಟ್ಗಳ ಹೀನಾಯ ಸೋಲು ಕಂಡ ಹಿನ್ನೆಲೆ ಬೇಸರದಲ್ಲಿ ಸಿಟ್ಟಿಗೆದ್ದ ಫ್ರಾಂಚೈಸಿ ಮಾಲಿಕ ಸಂಜೀವ್ ಗೋಯೆಂಕಾ(Sanjiv Goenka) ಮೈದಾನದಲ್ಲೇ ನಾಯಕ ಕೆ.ಎಲ್ ರಾಹುಲ್(KL Rahul) ಜತೆ ಜಗಳವಾಡಿದ್ದರು.
ಈ ಘಟನೆ ಬಳಿಕ ಅನೇಕ ಮಾಜಿ ಆಟಗಾರರು ಗೋಯೆಂಕಾ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಗೆ ಸಂಬಂಧಿಸಿ ರಾಹುಲ್ ಲಕ್ನೋ ತಂಡ ತೊರೆಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿತ್ತು. ತಂಡದ ಆಟಗಾರರೊಂದಿಗೆ ಪ್ರಯಾಣಿಸದೆ ಪ್ರತ್ಯೇಕವಾಗಿ ಪ್ರಯಾಣಿಸಿದ್ದಾರೆ ಹೀಗೆ ಹಲವು ವಿಚಾರಗಳು ಸಾಮಾಜಿಕಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಈ ಎಲ್ಲ ಊಹಾಪೋಹಕ್ಕೆ ತೆರೆ ಬಿದ್ದಂತೆ ಕಾಣುತ್ತಿದೆ.
ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಲಖನೌ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು, ಸೋಮವಾರ ತಮ್ಮ ತಂಡದ ನಾಯಕ ಕೆ ಎಲ್ ಅವರಿಗೆ ತಮ್ಮ ಮನೆಯಲ್ಲಿಯೇ ಡಿನ್ನರ್ ಪಾರ್ಟಿ ನೀಡಿದ್ದಾರೆ. ಈ ವೇಳೆ ಸಂಜೀವ್ ಗೋಯೆಂಕಾ ಅವರನ್ನು ರಾಹುಲ್ ಅಪ್ಪಿಕೊಂಡಿದ್ದಾರೆ. ಈ ಫೋಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸದ್ಯ ವೈರಲ್ ಆಗುತ್ತಿರುವ ಫೋಟೊದಲ್ಲಿ ರಾಹುಲ್ ಅವರನ್ನು ಗೋಯೆಂಕಾ ತಬ್ಬಿಕೊಂಡಿರಿವಂತೆ ಕಾಣುತ್ತಿದೆ. ರಾಹುಲ್ ಕೂಡ ನಗುಮುಗದಿಂದಲೇ ಕಾಣಿಸಿಕೊಂಡಿದ್ದಾರೆ. ಆದರೆ, ಗೋಯೆಂಕಾ ಅವರ ಮುಖ ಮಾತ್ರ ಸ್ಪಷ್ಟವಾಗಿ ಗೋಚರಿಸಿಲ್ಲ. ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಕಿದ್ದು “ಚಂಡಮಾರುತದ ನಂತರ ಶಾಂತ” ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ರಾಹುಲ್ ಮತ್ತು ಗೋಯೆಂಕಾ ನಡುವಿನ ಮುನಿಸು ಶಮನವಾದಂತೆ ಕಾಣುತ್ತಿದೆ.
ಲಖನೌ ಸೂಪರ್ ಜೈಂಟ್ಸ್ ತಂಡವು ಲೀಗ್ ಹಂತದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ತಮ್ಮ ಪಾಲಿನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಎರಡು ಪಂದ್ಯಗಳಲ್ಲಿ ಲಖನೌ ದೊಡ್ಡ ಅಂತರದಲ್ಲಿ ಜಯಿಸಿದರೆ, ಅನಾಯಾಸವಾಗಿ ಪ್ಲೇ ಆಫ್‌ಗೇರಲಿದೆ. ಒಂದು ವೇಳೆ ಒಂದು ಸೋಲು ಕಂಡರೂ ಬಹುತೇಕ ಲಖನೌ ಪಡೆಯ ಪ್ಲೇ ಆಫ್ ಕನಸು ನುಚ್ಚುನೂರಾಗಲಿದೆ.